ಉಳ್ಳಾಲ: ಮುಡಿಪು ಜಂಕ್ಷನ್ ನಲ್ಲಿರುವ ಮೆಡಿಕಲ್ ಸ್ಟೋರ್ ಎದುರುಗಡೆ ಒಂದೇ ಜಾಗದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹಾನಕ್ಕೆ ಪೊಲೀಸರು ನೋ ಪಾರ್ಕಿಂಗ್ ನಿಯಮದಂತೆ ತಿಂಗಳ ಅಂತರದಲ್ಲಿ 10 ಬಾರಿ ಪೊಲೀಸ್ ನೋಟಿಸ್ ನೀಡಿ ಸಾವಿರಾರು ರುಪಾಯಿ ದಂಡ ವಿಧಿಸಿದ್ದಾರೆ.
ಮೆಡಿಕಲ್ ಸ್ಟೋರ್ ನ ಮಾಲಕಿ ಪೊಲೀಸರು ನೀಡಿದ್ದ ನೋಟಿಸ್ ಗಳನ್ನು ಸ್ಟೋರ್ ನ ಎದುರು ಸಾರ್ವಜನಿಕ ಪ್ರದರ್ಶನಕ್ಕಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೋಟಿಸ್ ನಲ್ಲಿ ಒಂದೇ ಸಮಯ ನಮೂದಿಸಲಾಗಿದ್ದು, ದಿನಾಂಕ ಮಾತ್ರ ಬೇರೆ ಬೇರೆಯಾಗಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಉದ್ದೇಶ ಪೂರ್ವಕವಾಗಿ ನೋಟಿಸ್ ನೀಡಲಾಗುತ್ತಿದೆ ಎಂದು ಮೆಡಿಕಲ್ ಸ್ಟೋರ್ ನ ಮಾಲಕಿ ಆರೋಪಿಸಿದ್ದಾರೆ.
ಕಳೆದ ವರ್ಷ ಮುಡಿಪುವಿನಲ್ಲಿ ಸ್ಕೂಟರ್ ತಡೆದು, ನಿಮ್ಮ ಸ್ಕೂಟರ್ ವಿರುದ್ಧ 5,000 ರೂ ದಂಡವಿದೆ ಅದನ್ನು ಕಟ್ಟಿ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದರು. ಶ್ರೀಮತಿ ಅವರು ತಾನೇಕೆ ದಂಡ ಕಟ್ಟಬೇಕು ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರ ತಿಳಿಸಿದ್ದಾರೆ. ಈ ಕುರಿತು ನನಗೇನು ತಿಳಿದಿಲ್ಲ, ಯಾವುದೇ ನೋಟಿಸ್ ಕೂಡ ಬಂದಿಲ್ಲ ಎಂದು ಅವರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಶ್ರೀಮತಿ ಅವರಿಗೆ ತಿಂಗಳಿಗೆ 500 ರೂ ಹಾಗೂ 1,000 ರೂ ದಂಡ ಪ್ರಯೋಗದ ನೋಟಿಸ್ ಬರಲು ಪ್ರಾರಂಭವಾಯಿತು. ಇದುವರೆಗೆ ಶ್ರೀಮತಿ ಅವರಿಗೆ ಒಟ್ಟು 16 ನೋಟಿಸ್ ಗಳು ಬಂದಿವೆ.