ನವದೆಹಲಿ: ಕೋವಿಡ್ ರೂಪಾಂತರಿ ಓಮಿಕ್ರಾನ್ ವೈರಸ್ ನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಪಂಚದಾದ್ಯಂತ ಭೀತಿ ಸೃಷ್ಟಿಸಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 128 ಹೊಸ ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 781ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಬುಧವಾರ ಒಮಿಕ್ರಾನ್ ಸೋಂಕಿತರ ಸಂಖ್ಯೆ 781 ಆಗಿದ್ದು, 241 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಇದುವರೆಗೆ 238 ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟಾರೆ ಓಮಿಕ್ರಾನ್ ಪ್ರಕರಣಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ – 167 ಪ್ರಕರಣಗಳು, ಮತ್ತು ಗುಜರಾತ್ – 73 ಪ್ರಕರಣಗಳನ್ನು ಹೊಂದಿ ನಂತರದ ಸ್ಥಾನದಲ್ಲಿವೆ.
ಇನ್ನು ದೇಶದ ಇತರ ರಾಜ್ಯಗಳಾದ ತೆಲಂಗಾಣದಲ್ಲಿ 62, ರಾಜಸ್ಥಾನದಲ್ಲಿ 46, ಕರ್ನಾಟಕದಲ್ಲಿ 34, ತಮಿಳುನಾಡಿನಲ್ಲಿ 34 ಮತ್ತು ಹರಿಯಾಣದಲ್ಲಿ 12, ಮಧ್ಯಪ್ರದೇಶದಲ್ಲಿ 9, ಒಡಿಶಾದಲ್ಲಿ 8, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 6, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ತಲಾ 4, ಚಂಡೀಗಢ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 3 ಮತ್ತು ಉತ್ತರ ಪ್ರದೇಶದಲ್ಲಿ 2 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಉಳಿದಂತೆ ಗೋವಾ, ಹಿಮಾಚಲ ಪ್ರದೇಶ, ಲಡಾಖ್ ಮತ್ತು ಮಣಿಪುರದಲ್ಲಿ ತಲಾ ಒಂದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಇನ್ನು ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 9,195 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 77,002 ಕ್ಕೆ ಏರಿಕೆಯಾಗಿದೆ.