ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಮಕ್ಕಳಿಗೆ ಬಿಸಿ ಊಟ ನೀಡಲಾಗುತ್ತಿದೆ. ಈ ಊಟ ತಯಾರಿಸುವ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಕಾರ್ಮಿಕ ಇಲಾಖೆಯು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯಡಿ ಫಲಾನುಭವಿಯಾಗಿ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆ ಸಿಬ್ಬಂದಿಗಳಿಗೆ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಯನ್ನು ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಸಲುವಾಗಿ ಜಾರಿಗೆ ತಂದಿದೆ. ಈ ಯೋಜನೆಯ ಸೌಲಭ್ಯವನ್ನು 18-40 ವರ್ಷ ವಯೋಮಾನದ ಮಧ್ಯಾಹ್ನದ ಉಪಹಾರ ಯೋಜನೆಯಡಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆ ಸಿಬ್ಬಂದಿಗಳು ಪಡೆದುಕೊಳ್ಳಬಹುದಾಗಿದೆ. ಕಾರ್ಮಿಕ ಇಲಾಖೆಯು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅಗತ್ಯ ಮಾಹಿತಿ ನೀಡಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ.
ರಾಜ್ಯದಲ್ಲಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಇವರು 60 ವರ್ಷ ಪೂರೈಸಿದ ನಂತರ ಮಾಸಿಕ ಪಿಂಚಣಿ ಸೌಲಭ್ಯ ಪಡೆಯುವ ಮೂಲಕ ಆರ್ಥಿಕ ಭದ್ರತೆ ಹೊಂದಬಹುದಾಗಿದೆ.