ಜೀ 5 ಓಟಿಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ಬಿಡುಗಡೆಯಾಗಿದ್ದು ಇದೀಗ ಹೊಸ ದಾಖಲೆಯನ್ನು ಮಾಡಿದೆ. ಈ ಚಿತ್ರ ಜೀ 5 ಓಟಿಟಿಯಲ್ಲಿ ಬಿಡುಗಡೆಯಾದ ಮೂರೇ ದಿನಗಳಲ್ಲಿ 5 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆಯಾಗಿ ಹೊಸ ದಾಖಲೆಯನ್ನು ಮಾಡಿದೆ.
‘ಭಜರಂಗಿ 2’ ಚಿತ್ರವು ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆಯಾದ ಚಿತ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದಾಖಲೆಯಿಂದ ಇಡೀ ಚಿತ್ರತಂಡ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿಗಳು ಸಂತಸರಾಗಿದ್ದಾರೆ. ಈ ದಾಖಲೆಯ ವಿಚಾರವನ್ನು ಜೀ5 ಟ್ವೀಟ್ ಮಾಡಿ ವೀಕ್ಷಕರಿಗೆ ಧನ್ಯವಾದ ಹೇಳುವ ಮೂಲಕ ತನ್ನ ಸಂತಸ ಹಂಚಿಕೊಂಡಿದೆ.
ಶಿವರಾಜ್‌ಕುಮಾರ್ ಅವರು ನಾನು ಹಾಗೂ ನನ್ನ ಚಿತ್ರತಂಡ ‘ಭಜರಂಗಿ 2’ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
‘ಭಜರಂಗಿ 2’ ಚಿತ್ರವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಭಾವನಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ಸೌರವ್ ಲೋಕೇಶ್, ಹಿರಿಯ ನಟಿ ಶ್ರುತಿ, ಚೆಲುವ ರಾಜು, ಶಿವರಾಜ್ ಕೆ.ಆರ್.ಪೇಟೆ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ. ಚಿತ್ರಕ್ಕೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡಿದ್ದಾರೆ.