ಬೀಟ್ ರೂಟ್ ಪಲ್ಯ, ಸಾಂಬಾರ್ ತಿಂದು ಬೇಜಾರಾಗಿರುವವರು ಬೀಟ್ ರೂಟ್ ನಿಂದ ಹಲ್ವ ತಯಾರಿಸಿಕೊಳ್ಳಬಹುದು.
ಬೀಟ್ ರೂಟ್ ಹಲ್ವ ಮಾಡಲು ಬೇಕಾಗುವ ಸಾಮಾಗ್ರಿಗಳು:
- ತುಪ್ಪ 3 ಚಮಚ
- ತುರಿದ ಬೀಟ್ ರೂಟ್ 4 ಕಪ್
- ಹಾಲು ಒಂದು ಕಾಲು ಕಪ್
- ಸಕ್ಕರೆ ಕಾಲು ಕಪ್
- ಹಾಲಿನ ಪುಡಿ ಅರ್ಧ ಕಪ್
- ಗೋಡಂಬಿ 5 ರಿಂದ 6
- ಏಲಕ್ಕಿ ಪುಡಿ ಕಾಲು ಚಮಚ
ಬೀಟ್ ರೂಟ್ ಹಲ್ವ ಮಾಡುವ ವಿಧಾನ:
ಮೊದಲಿಗೆ ಒಂದು ಪಾನ್ ಗೆ 2 ಚಮಚ ತುಪ್ಪ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ತುರಿದ 4 ಕಪ್ ಬೀಟ್ ರೂಟ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಒಂದು ಕಪ್ ಹಾಲು ಹಾಕಿ ಕೈಯಾಡಿಸುತ್ತಾ ಇರಿ. ನಂತರ ಪಾನ್ ಗೆ ಒಂದು ತಟ್ಟೆ ಮುಚ್ಚಿ ಹಾಲನ್ನು ಕುದಿಯಲು ಬಿಡಿ.
ಈ ಹಾಲು ಕುದ್ದು ಕಡಿಮೆಯಾಗುತ್ತಾ ಬಂದ ಹಾಗೆ ಇದಕ್ಕೆ ಕಾಲು ಕಪ್ ಸಕ್ಕರೆ ಹಾಕಿ ಕೈಯಾಡಿಸಿ. ಸಕ್ಕರೆ ಪೂರ್ತಿ ಕರಗಿ ನೀರು ಆವಿಯಾಗಿ ಈ ಮಿಶ್ರಣ ಗಟ್ಟಿಯಾಗುತ್ತಾ ಬಂದ ಹಾಗೆ ಈ ಪಾನ್ ಅನ್ನು ಕೆಳಗೆ ಇಳಿಸಿ.
ನಂತರ ಇನ್ನೊಂದು ಪಾನ್ ತೆಗೆದುಕೊಂಡು ಅದಕ್ಕೆ ಇಂದು ಚಮಚ ತುಪ್ಪ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಕಾಲು ಕಪ್ ಹಾಲು ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಅರ್ಧ ಕಪ್ ಹಾಲಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಇದು ಗಟ್ಟಿಯಾಗುವ ವರೆಗೂ ಕೈಯಾಡಿಸುತ್ತಾಲೇ ಇರಿ. ಅಡಿ ಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು.
ಇದಾದ ನಂತರ ಈ ಮಿಶ್ರಣವನ್ನು ಈಗಾಗಲೇ ಹುರಿದಿಟ್ಟುಕೊಂಡಿರುವ ಬೀಟ್ ರೋಟ್ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ನಂತರ ಸಣ್ಣ ಸಣ್ಣಗೆ ತುಂಡು ಮಾಡಿಕೊಂಡಿರುವ ಗೋಡಂಬಿ 5 ರಿಂದ 6, ಏಲಕ್ಕಿ ಪುಡಿ ಕಾಲು ಚಮಚ ಹಾಕಿ ಚೆನ್ನಾಗಿ ಕಲಸಿದರೆ ಬೀಟ್ ರೂಟ್ ಹಲ್ವ ಸವಿಯಲು ಸಿದ್ಧ.