ಕನ್ನಡ ಚಿತ್ರರಂಗದ ಸುದೀಪ್, ಉಪೇಂದ್ರ ಹೀಗೆ ಅನೇಕ ನಟರು ತೆಲುಗು ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ದುನಿಯಾ ವಿಜಯ್ ಅವರು ಈಗ ಟಾಲಿವುಡ್‌ನಲ್ಲಿ ಪ್ರಪ್ರಥಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡದ ಮತ್ತೊಬ್ಬ ನಟ ಟಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರವು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ನಂತರ ದುನಿಯಾ ವಿಜಯ್ ಅವರು ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ನಂದಮೂರಿ ಬಾಲಕೃಷ್ಣ ಅವರ ಮುಂದಿನ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರು ಅಭಿನಯಿಸುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕೂಡ ಇವರ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತಿತ್ತು. ಆದರೆ ಈ ಕುರಿತು ದುನಿಯಾ ವಿಜಯ್ ಆಗಲಿ ಚಿತ್ರತಂಡವಾಗಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ಚಿತ್ರತಂಡವೇ ದುನಿಯಾ ವಿಜಯ್ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ.
ಈ ಚಿತ್ರವು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ದುನಿಯಾ ವಿಜಯ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸುವ ಮೂಲಕ ಎಲ್ಲರ ಗೊಂದಲಕ್ಕೆ ತೆರೆ ಎಳೆಯಲಾಗಿದೆ.
ಈ ಚಿತ್ರವನ್ನು ನೈಜ ಘಟನೆಗಳನ್ನು ಆಧರಿಸಿ ಮಾಡಲಾಗುತ್ತಿದೆ. ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ನಿರ್ದೇಶಿಸಲಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ದುನಿಯಾ ವಿಜಯ್ ಅವರನ್ನು ನಿರ್ದೇಶಕ ಸ್ವಾಗತಿಸಿದ್ದಾರೆ.
ತೆಲುಗು ನಟ ಬಾಲಕೃಷ್ಣ ಅಭಿನಯದ 107ನೇ ಚಿತ್ರವಾಗಿದೆ. ಈ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ದುನಿಯಾ ವಿಜಯ್ ಅವರು ಈ ಚಿತ್ರಕ್ಕಾಗಿ ಈಗಾಗಲೇ ತಮ್ಮ ಹೇರ್ ಸ್ಟೈಲ್ ಮತ್ತು ಲುಕ್ ಬದಲಾಯಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಯಾವ ಪಾತ್ರ ಮಾಡಲಿದ್ದಾರೆ ಎಂಬ ಕುರಿತು ಇನ್ನು ಯಾವುದೇ ಮಾಹಿತಿ ತಿಳಿದುಬಂದಿಲ್ಲ.