ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಲೇ ಇದ್ದು, ಪ್ರಸ್ತುತ ದೇಶದಲ್ಲಿ 8 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 4 ಸಾವಿರ ದಾಟಿದೆ. ಜನವರಿ 13ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಸಭೆ ನಡೆಸಲಿದ್ದಾರೆ. ಆಯಾ ರಾಜ್ಯಗಳಲ್ಲಿನ ಕೊವಿಡ್ ನ ಸ್ಥಿತಿಗತಿ, ತೆಗೆದುಕೊಳ್ಳ ಬಹುದಾದ ಸೂಕ್ತ ಕ್ರಮಗಳು, ಸಾವಿನ ಸಂಖ್ಯೆ, ಚಿಕಿತ್ಸೆ ಗೆ ಬೇಕಾದ ಸೌಲಭ್ಯಗಳ ವಿವರ ಹೀಗೆ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಜನವರಿ 9 ರಂದು ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದಾದ ನಂತರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸುವುದಾಗಿ ಹೇಳಿದ್ದರು. ಜನವರಿ 9 ರಂದು ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಗೂ ಮಿಷನ್ ಮೋಡ್ನಲ್ಲಿ ಯುವಜನತೆಗೆ ಲಸಿಕೆ ನೀಡಲು ನಿರ್ದೇಶಿಸಲಾಗಿತ್ತು. ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಭೆಯಲ್ಲಿ ಭಾಗವಹಿಸಿದ್ದರು.