ಕೊರೋನಾ ಕಾರಣದಿಂದ ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುವ ದಿನಾಂಕವನ್ನು ಮುಂದೂಡುತ್ತಾ ಬರುತ್ತಿದೆ. ಈ ಪಟ್ಟಿಗೆ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕೂಡ ಸೇರಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಸಂಜಯ್ ದತ್ ಅಧೀರ ಪಾತ್ರವನ್ನು, ರವೀನಾ ಟಂಡನ್ ರಮಿಕಾ ಸೇನ್ ಪಾತ್ರವನ್ನು ಅಭಿನಯಿಸಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಸಂಜಯ್ ದತ್ ಅವರು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯ ಮಾಡುತ್ತಿದ್ದು, ರವೀನಾ ಟಂಡನ್ ಅವರ ಎರಡನೇ ಸಿನಿಮಾ ಇದಾಗಿದೆ. ಇವರು 1999ರಲ್ಲಿ ಬಿಡುಗಡೆಯಾದ ‘ಉಪೇಂದ್ರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಂತರ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರಿಬ್ಬರು ನಟಿಸಲಿರುವ ಈ ಸಿನಿಮಾಗೆ ಹೊಸ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳಲಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ. ಇವರಿಬ್ಬರು ಸಿನಿಮಾದಲ್ಲಿ ಜೊತೆಯಾಗಿ ನಟಿಸಲು ಈಗಾಗಲೇ ಒಪ್ಪಿಗೆಯನ್ನು ನೀಡಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ ಡ್ರಾಮಾ ಕಥೆ ಇರಲಿದೆ ಎಂದು ತಿಳಿದುಬಂದಿದೆ.
ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರು ಜೊತೆಯಾಗಿ ನಟಿಸಿದ್ದ ‘ಕ್ಷತ್ರಿಯಾ’, ‘ಆತಿಶ್’ ಸಿನಿಮಾಗಳು ಹಿಟ್ ಆಗಿದ್ದವು. ಇನ್ನು ಈ ಸಿನಿಮಾಗೆ ಇವರಿಬ್ಬರು ಒಪ್ಪಂದಕ್ಕೆ ಸಹಿ ಹಾಕುವುದು ಬಾಕಿ ಇದ್ದು, ಕಥೆಯ ಫೈನಲ್ ಡ್ರಾಫ್ಟ್ ಸಿದ್ಧವಾಗಬೇಕಿದೆ. ಈ ಸಿನಿಮಾ ಅಧಿಕೃತವಾಗಿ ಫೆಬ್ರವರಿ ವೇಳೆಗೆ ಘೋಷಣೆ ಆಗುವ ನಿರೀಕ್ಷೆ ಇದೆ.