ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಮಾಡುವ ಎರಡು ದಿನಗಳ ಮೊದಲು 2020ರ ಮಾರ್ಚ್ 23ರಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನವನ್ನು ನಿಲ್ಲಿಸಲಾಗಿತ್ತು. ಇದೀಗ ಆ ನಿರ್ಬಂಧವನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ.
ನಾಗರಿಕ ವಿಮಾನಯಾನದ ಮಹಾನಿರ್ದೇಶಕರು ದೇಶದಲ್ಲಿ ಫೆಬ್ರವರಿ 28ರವರೆಗೆ ನಿಗದಿತ ವಾಣಿಜ್ಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಕಾರ್ಗೋ ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಏರ್ ಬಬಲ್ ಒಪ್ಪಂದಗಳು ಹಾಗೂ ಮಿಷನ್ ವಂದೇ ಭಾರತ್ ಅಡಿಯಲ್ಲಿ ಎಲ್ಲಾ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಮೊದಲು ಒಮಿಕ್ರಾನ್ ಹೆಚ್ಚುತ್ತಿರುವ ಆತಂಕದಿಂದ ಡಿಸೆಂಬರ್ 1ರಂದು ಸೇವೆಗಳನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿತ್ತು. ಇದಾದ ಒಂದು ವಾರದೊಳಗೆ ಡಿಸೆಂಬರ್ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಮತ್ತೆ ಆರಂಭಿಸುವ ನಿರ್ಧಾರ ಕೈಬಿಟ್ಟಿತು.
ಭಾರತವು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಹ್ರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಖಜಕಿಸ್ತಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಕತಾರ್, ಜೊತೆಗೆ ವಾಯು ಏರ್ ಬಬಲ್ ಒಪ್ಪಂದವನ್ನು ಹೊಂದಿದೆ. ರಷ್ಯಾ, ರುವಾಂಡಾ, ಸೌದಿ ಅರೇಬಿಯಾ, ಸೀಶೆಲ್ಸ್, ಸಿಂಗಾಪುರ್, ಶ್ರೀಲಂಕಾ, ಸ್ವಿಟ್ಜರ್ಲೆಂಡ್, ತಾಂಜಾನಿಯಾ, ಉಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಮತ್ತು ಉಜ್ಬೇಕಿಸ್ತಾನ್ ಒಪ್ಪಂದಗಳು ಕೆಲವು ನಿಯಮಗಳು ಮತ್ತು ಷರತ್ತುಗಳ ಅನುಸಾರ ಎರಡೂ ಮಾರ್ಗದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.