ಮುಂಬೈ: 20 ಅಂತಸ್ತಿನ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿ, 15ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ವಾಣಿಜ್ಯ ನಗರಿ ಮುಂಬೈನ ಭಾಟಿಯಾ ಆಸ್ಪತ್ರೆ ಬಳಿ ಇರುವ ಕಮಲ ಎನ್ನುವ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ.
ಕಟ್ಟಡದ 18ನೇ ಅಂತಸ್ತಿನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಇದರಿಂದ ಅಪಾರ ಹಾನಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿದ ಬಳಿಕ ಸ್ಥಳಕ್ಕೆ ದೌಡಾಯಿಸಿದ 20ಕ್ಕೂ ಅಧಿಕ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಗ್ನಿ ಅವಘಡಕ್ಕೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.