ಉಡುಪಿ: ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಇದೀಗ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷತೆಯನ್ನು ಕಿರಿಯ ಯತಿಗಳಾದ ಈಶಪ್ರಿಯತೀರ್ಥ ಶ್ರೀಪಾದರಿಗೆ ಬಿಟ್ಟುಕೊಟ್ಟಿದ್ದಾರೆ. ಈಗಾಗಲೇ ಹಿರಿಯ ಯತಿಗಳು ಅದಮಾರು ಮಠದ ವ್ಯವಹಾರಗಳನ್ನು ಕಿರಿಯ ಯತಿಗಳಿಗೆ ಬಿಟ್ಟುಕೊಟ್ಟಿದ್ದರು.
ಅದಮಾರು ಮಠದ ಪರ್ಯಾಯವು ಜನವರಿ 18 ರಂದು ಮುಗಿಯಿತು. ಇದಾದ ಬಳಿಕ ಬೆಂಗಳೂರಿನಲ್ಲಿ ನಡೆದ ಮಂಡಳಿಯ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಪ್ರಮುಖರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರೊಂದಿಗೆ ನಡೆದ ಸಭೆಯಲ್ಲಿ ಕಿರಿಯ ಯತಿಗಳು ಇನ್ನು ಮುಂದೆ ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಪರ್ಯಾಯಕ್ಕೆ ಕುಳಿತುಕೊಳ್ಳುವ ಮುನ್ನವೇ ಮಠದ ಆಡಳಿತವನ್ನು ಕಿರಿಯ ಯತಿಗಳಿಗೆ ವಹಿಸಿಕೊಡುವಾಗಲೇ ಶಿಕ್ಷಣ ಸಂಸ್ಥೆಯ ಜವಬ್ದಾರಿಯನ್ನು ವಹಿಸಿಕೊಡಬೇಕೆಂದಿದ್ದೆ. ಆದರೆ ಕಿರಿಯ ಯತಿಗಳು ಒಪ್ಪದೇ ಇರುವುದರಿಂದ ಈಗ ಈ ಜವಬ್ದಾರಿಯನ್ನು ನೀಡುತ್ತಿದ್ದೇನೆ. 10 ರಿಂದ 15 ದಿನಗಳಲ್ಲಿ ಕಾನೂನಾತ್ಮಕವಾಗಿ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.