ಮಲ್ಪೆ: ಮಲ್ಪೆಯ ಬಂದರಿನಲ್ಲಿ 60 ಕೆ.ಜಿ. ತೂಕದ ಮಡಲು ಮೀನು ಸನ್ಮಯ ಬೋಟಿನ ಬಲೆಗೆ ಬಿದ್ದಿದ್ದು, ಈ ಮೀನನ್ನು ನೋಡಲು ಜನರು ಜಮಾಯಿಸುತ್ತಿದ್ದಾರೆ.
ಮಡಲು ಮೀನು ಕೆ.ಜಿ.ಗೆ 120 ರುಪಾಯಿಯಂತೆ ಮಾರಾಟವಾಗಿದೆ. ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಇರುವ ಈ ಮೀನು 60 ಕೆ.ಜಿ ಇರುವುದು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್ ತಿಳಿಸಿದ್ದಾರೆ.
ಮಡಲು ಮೀನಿಗೆ ವೈಜ್ಞಾನಿಕವಾಗಿ ಸೈಲ್ ಮೀನು ಎಂಬ ಹೆಸರಿದೆ. ಆದರೆ ಈ ಮೀನು ಮಡಲಿನ(ತೆಂಗಿನ ಸೋಗೆ) ಆಕಾರದಲ್ಲಿ ಇರುವುದರಿಂದ ಆಡು ಭಾಷೆಯಲ್ಲಿ ಮಡಲು ಮೀನು ಎಂದು ಕರೆಯಲಾಗುತ್ತದೆ. ಮಡಲು ಮೀನು ಬೇರೆಲ್ಲಾ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ ಅಂದರೆ ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಮೀನು ಬಂಗುಡೆ, ಬೂತಾಯಿ, ಅಕ್ಟೋಪಸ್ ಹೀಗೆ ಇನ್ನಿತರ ಮೀನುಗಳನ್ನು ತಿನ್ನುತ್ತದೆ.