ಬೆಂಗಳೂರು: ಕೊರೊನಾದಿಂದ ರಾಜ್ಯದ ಆರ್ಥಿಕತೆಯು ಕುಸಿದಿದ್ದು, ಆರ್ಥಿಕತೆಯ ಪುನಶ್ಚೇತನಕ್ಕೆ ಮುಂಬರುವ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5 ರಿಂದ 10ರವರೆಗೆ ಅಬಕಾರಿ ಸುಂಕ ವಿಧಿಸಲು ಚಿಂತನೆ ನಡೆಸಿದೆ. ಫೆಬ್ರವರಿ 25 ಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಮದ್ಯ ಮಾರಾಟದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಬರುತ್ತದೆ. ಇದರಿಂದ ಪ್ರತಿ ವರ್ಷ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿ ನೀಡಲಾಗುತ್ತಿದೆ. 24,580 ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿಯನ್ನು 2021-22 ರಲ್ಲಿ ಹೊಂದಲಾಗಿತ್ತು. ಇದೀಗ 2022-23 ಸಾಲಿನಲ್ಲಿ ಸುಮಾರು 27,000 ಕೋಟಿ ರೂಪಾಯಿ ಆದಾಯ ಸಂಗ್ರಹ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.