ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶ ಪಡಿಸಿಕೊಂಡಾಗಿನಿಂದ 34 ಪ್ರಾಂತ್ಯಗಳ ಪೈಕಿ 33 ಪ್ರಾಂತ್ಯಗಳಲ್ಲಿನ ಸುಮಾರು 318 ಮಾಧ್ಯಮ ಸಂಸ್ಥೆಗಳ ಕಾರ್ಯಾಚರಣೆಯು ಸ್ಥಗಿತಗೊಂಡಿದೆ.
ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್ ಜೆ) ನೀಡಿದ ವರದಿಯ ಅನುಸಾರ 51 ಟಿವಿ ಸ್ಟೇಷನ್ಸ್, 132 ರೇಡಿಯೋ ಸ್ಟೇಷನ್ಸ್ ಹಾಗೂ 49 ಆನ್ ಲೈನ್ ಮೀಡಿಯಾ ಸಂಸ್ಥೆಗಳು ಸ್ಥಗಿತಗೊಂಡಿವೆ. ಹಾಗೇ ಟೊಲೊ ನ್ಯೂಸ್ ವರದಿಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸುದ್ದಿ ಪತ್ರಿಕೆಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದ್ದು, 114 ಸುದ್ದಿ ಪತ್ರಿಕೆಗಳ ಪೈಕಿ ಕೇವಲ 20 ಸುದ್ದಿ ಪತ್ರಿಕೆಗಳು ಮುದ್ರಣವನ್ನು ಮುಂದುವರೆಸಿವೆ ಎಂದು ತಿಳಿದುಬಂದಿದೆ.
ಈ ಕುರಿತು ಐಎಫ್ ಜೆ ಕಳವಳ ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಸಂದರ್ಭ 5,069 ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಕೇವಲ 2,334 ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ. ಶೇಕಡಾ 72 ರಷ್ಟು ಮಹಿಳಾ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಪ್ರಸ್ತುತ 243 ಮಹಿಳಾ ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ.
ಐಎಫ್ ಜೆ ಪ್ರಧಾನ ಕಾರ್ಯದರ್ಶಿ ಆಂಟೊನಿ ಬೆಳ್ಳಂಜೆರ್ ಅವರು ಅಫ್ಘಾನಿಸ್ತಾನದಲ್ಲಿ ಪತ್ರಕರ್ತರು ಕೆಲಸ ಕಳೆದುಕೊಂಡಿರುವುದಷ್ಟೇ ಅಲ್ಲದೇ ಅವರನ್ನು ಪಲಾಯನ ಮಾಡಲು ಒತ್ತಾಯಿಸಲಾಗಿದೆ. ಸಾರ್ವಜನಿಕರಿಗೆ ಮಾಹಿತಿ ಸಿಗದಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.