Saturday, June 7, 2025

ನೀವು ತಿನ್ನುವ ಆಹಾರ ಎಷ್ಟು ಸುರಕ್ಷಿತ ಅಂತ ಗೊತ್ತಾ?

ಮೈಮುನ ಅಸ್ಲಾಂ– ನ್ಯೂಸ್ ಪ್ಲಸ್ ಡೆಸ್ಕ್

ದಿನನಿತ್ಯ ನಾವು ಹಲವು ವಿಧದ ಆಹಾರ ವಸ್ತುಗಳನ್ನು ಸೇವಿಸುತ್ತೇವೆ. ಆದರೆ ಇತ್ತೀಚಿನ ಆಹಾರ ವಸ್ತುಗಳಲ್ಲಿ ಕಲಬೆರೆಕೆ ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಆರೋಗ್ಯವನ್ನು ವೃದ್ಧಿಸಲು ಹಾಲನ್ನು ಕುಡಿಯಲು ಹೋದರೆ ಉಲ್ಟಾ ನಮ್ಮ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅಷ್ಟೊಂದು ರಾಸಾಯನಿಕ ವಸ್ತುಗಳನ್ನು ಈಗ ಆಹಾರದಲ್ಲಿ ಸೇರಿಸಲಾಗುತ್ತಿದೆ. ಶುದ್ಧ ಆಹಾರವೆನ್ನುವುದು ಮಾನವ ಜೀವನಕ್ಕೆ ಬೇಕಾದ ಅತೀ ಪ್ರಮುಖ ಮೂಲಭೂತ ವಸ್ತುಗಳಲ್ಲಿ ಒಂದು. ನಾವು ತಿನ್ನುವ ಆಹಾರ ವಸ್ತುಗಳು ನಮ್ಮ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಆದರೆ ಈಗ ಯಾವುದೇ ಒಂದು ಆಹಾರ ವಸ್ತುವನ್ನು ಧೈರ್ಯದಿಂದ ತಿನ್ನಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಅಷ್ಟೊಂದು ವಿಷಕಾರಿ ಕಲಬೆರೆಕೆಯನ್ನು ಆಹಾರ ವಸ್ತುಗಳಲ್ಲಿ ಸೇರಿಸಲಾಗುತ್ತಿದೆ.

ಆರೋಗ್ಯವೇ ಭಾಗ್ಯ ಎಂಬ ಹಾಗೆ ಒಬ್ಬ ಆರೋಗ್ಯವಂತ ವ್ಯಕ್ತಿ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನಿಗೆ ಪ್ರಮುಖವಾಗಿ ಬೇಕಾಗಿರುವುದೇ ಆರೋಗ್ಯ. ಗುಣಮಟ್ಟ ಮತ್ತು ತಾಜಾ ಆಹಾರ ಸೇವನೆ ಮಾನಸಿಕ ಬೆಳವಣಿಗೆ ಮತ್ತು ಉತ್ತಮ ದೈಹಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರವು ಮನುಷ್ಯನಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ವಸ್ತು. ಇದರ ಬಗ್ಗೆ ಸುರಕ್ಷತೆ ವಹಿಸದಿದ್ದರೆ ದೊಡ್ಡ ಪ್ರಮಾಣದ ಅನಾರೋಗ್ಯ ಮತ್ತು ಅಪಾಯವನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ನಾವು ದಿನನಿತ್ಯ ಉಪಯೋಗಿಸುವ ಆಹಾರ ಧಾನ್ಯಗಳು, ಸೊಪ್ಪು-ತರಕಾರಿ, ಮೀನು-ಮಾಂಸ, ಹಾಲಿನಲ್ಲೂ ವಿಷಕಾರಿ ಕಲಬೆರೆಕೆಯನ್ನು ಸೇರಿಸಲಾಗುತ್ತಿದೆ. ಇವುಗಳನ್ನು ಸೇವಿಸುವಾಗ ನಮಗೂ ತಿಳಿಯದೆ ಈ ವಿಷ ನಮ್ಮ ಶರೀರದೊಳಗೆ ಸೇರುತ್ತದೆ.

ಎಲ್ಲವೂ ಕಲಬೆರಕೆ ಮಾರಾರ್ರೆ!

ಪರಿಶುದ್ಧವಾದ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿಯನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ. ಅದೇ ತರಹ ಹಾಲಿನ ಬಣ್ಣದ್ದೇ ರಾಸಾಯನಿಕ ವಸ್ತುಗಳನ್ನು ಸೇರಿಸಿ ನೈಜ್ಯತೆಯನ್ನು ಸೋಲಿಸುವ ಹಾಲನ್ನು ಉತ್ಪತ್ತಿ ಮಾಡಲಾಗುತ್ತಿದೆ. ಹಾಗಾಗಿ ಅಮೃತವೆನ್ನುವ ಹಾಲು ವಿಷವಾಗಿ ಮಾರ್ಪಾಡಾಗುತ್ತದೆ. ಇದು ಯಾವುದರ ಅರಿವಿಲ್ಲದೆ, ಪುಟ್ಟ ಮಕ್ಕಳು ಸೇರಿ ಸಾಮಾನ್ಯ ಜನರು ಈ ಹಾಲನ್ನೇ ಸೇವಿಸುತ್ತಾರೆ. ಹೋಟೆಲ್ ಹಾಗೂ ಫಾಸ್ಟ್ ಫುಡ್ ಆಹಾರದ ಕಥೆನೂ ಬೇರೇನಿಲ್ಲ. ಫಾಸ್ಟ್ ಫುಡ್, ತಳ್ಳು ಗಾಡಿ, ಆಹಾರೋತ್ಪನ್ನಗಳ ಮಳಿಗೆ ಸೇರಿದಂತೆ ಹೋಟೆಲ್ ಗಳಲ್ಲಿ ಕಳಪೆ ದರ್ಜೆಯ ಎಣ್ಣೆ ಬಳಸುವುದು, ಅಲ್ಲದೇ ಹಲವು ಬಾರಿ ಬಳಸಿದ ಎಣ್ಣೆಯನ್ನೇ ಮತ್ತೇ ಮತ್ತೇ ಬಳಸುವುದು, ಖಾದ್ಯ ಪದಾರ್ಥಗಳಿಗೆ ರಾಸಾಯನಿಕಯುಕ್ತ ಬಣ್ಣಗಳನ್ನು ಮಿಶ್ರಣ ಮಾಡುವುದು, ಆಹಾರ ವಸ್ತುಗಳ ರುಚಿಯನ್ನು ಹೆಚ್ಚಿಸಲು ಟೇಸ್ಟಿಂಗ್ ಪೌಡರ್ ಗಳನ್ನು ಬಳಸುವುದು, ಇವುಗಳನ್ನು ಸೇವಿಸುವುದರಿಂದ ನಮ್ಮ ಶರೀರದಲ್ಲಿ ಉಂಟಾಗುವ ದೋಷಗಳು ಎಷ್ಟರ ಮಟ್ಟಕ್ಕೆ ಎನ್ನುವುದು ನಮಗೆ ತಿಳಿದಿರುವುದಿಲ್ಲ.

ಉಡುಪಿ ಜಿಲ್ಲೆಯ ಕತೆ ಕೇಳಿ !

ಕಲಬೆರೆಕೆ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಕ್ಯಾನ್ಸರ್, ಅಲರ್ಜಿ, ಚರ್ಮದ ಕಾಯಿಲೆಗಳು, ಮೆದುಳಿನ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಗ್ಯಾಸ್ಟ್ರಿಕ್ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಇವುಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಡುಪಿಯಲ್ಲಿ ಇದೀಗ ಇಂತಹ ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಮಾರುವವರ ವಿರುದ್ಧ ಜಿಲ್ಲಾಡಳಿತ ದುಬಾರಿ ದಂಡದ ಜೊತೆಗೆ ಕೇಸ್ ದಾಖಲಿಸಲು ಮುಂದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 2,619 ಸಕ್ರಿಯ ಪರವಾನಗಿ, 3 ಸರೆಂಡರ್ ಮಾಡಲಾದ ಪರವಾನಗಿ, 1,237 ಅವಧಿ ಮೀರಿದ ಪರವಾನಗಿ ಹಾಗೂ 40 ರದ್ದಾದ ಪರವಾನಿಗೆಗಳಿವೆ. ಜಿಲ್ಲೆಯ ಕೆಲವೆಡೆ ಆಹಾರೋತ್ಪನ್ನಗಳನ್ನು ಮಾರಾಟ ಮಾಡುವವರು ಪರವಾನಗಿ ತೆಗೆದುಕೊಳ್ಳದೆ ನಿಯಮಗಳನ್ನು ಉಲ್ಲಂಘಿಸಿ, ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುವ ಆಹಾರೋತ್ಪನ್ನ ಮಳಿಗೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ.

ಇನ್ನು ಸಸ್ಯಹಾರ ಉತ್ಪನ್ನಗಳ ಪ್ಯಾಕೇಟ್ ಮೇಲೆ ನಿಯಮಾವಳಿ ಪ್ರಕಾರ ಎಫ್ ಎಸ್ ಎಸ್ ಎ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ಸಸ್ಯಹಾರಿಗೆ ಹಸಿರು ಬಣ್ಣ ಹಾಗೂ ಮಾಂಸಾಹಾರಿ ಪ್ಯಾಕೆಟ್ ಗೆ ಕಂದು ಬಣ್ಣದ ಚಿಹ್ನೆ ಇರಬೇಕು. ಉತ್ಪನ್ನದ ಸಂಪೂರ್ಣ ಮಾಹಿತಿಯನ್ನೂ ನಮೂದಿಸಬೇಕು. ಆದರೆ ಕೆಲವೊಬ್ಬರು ತಾವೇ ಉತ್ಪನ್ನಗಳನ್ನು ತಯಾರಿಸಿ ನಿಯಮಾವಳಿ ಉಲ್ಲಂಘಿಸುವ ಮಾಹಿತಿ ಲಭ್ಯವಿದೆ. ಈ ರೀತಿಯ ಕೃತ್ಯ ಎಸಗುವವರ ವಿರುದ್ಧ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿ 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೋಟೆಲ್ ವಿನ್ಯಾಸ, ಒಳಾಂಗಣ ವಾತಾವರಣ, ಡ್ರೈನೇಜ್ ಅಳವಡಿಕೆ, ಕುಡಿಯುವ ನೀರಿನ ಗುಣಮಟ್ಟ, ಸಿಬ್ಬಂದಿ ಆರೋಗ್ಯ , ರಕ್ಷಣಾ ಪರಿಕರಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ. ಇನ್ನು ಕೀಟ, ಹೆಗ್ಗಣ ಕಾಟ, ಸ್ಟೋರೇಜ್ ಉಷ್ಣತೆಯನ್ನು ಸಮ ಪ್ರಮಾಣದಲ್ಲಿ ಕಾಪಾಡುತ್ತಿರುವ ಬಗ್ಗೆ, ಆಹಾರ ಸಾಗಾಟ ವಾಹನ ಮತ್ತು ಉಪಯೋಗಿಸುವ ಯಂತ್ರೋಪಕರಣಗಳ ಗುಣಮಟ್ಟಗಳನ್ನು ಪರಿಶೀಲಿಸಲಾಗುತ್ತದೆ. ಈ ಯಾವುದರಲ್ಲೂ ಲೋಪ ಕಾಣಿಸಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸುರಕ್ಷಿತ ಆಹಾರ ರೋಗ ರುಜಿನಗಳಿಂದ ಹಾಗೂ ಅಪಾಯದ ಮೂಲಗಳಿಂದ ಮುಕ್ತವಾಗಿರುತ್ತದೆ. ಆಹಾರವು ಮನುಷ್ಯನಿಗೆ ಅತ್ಯವಶ್ಯಕವಾದ ವಸ್ತುವಾಗಿದ್ದು ಇದರ ಬಗ್ಗೆ ಸುರಕ್ಷತೆ ವಹಿಸದಿದ್ದರೆ ದೊಡ್ಡ ಪ್ರಮಾಣದ ಅನಾರೋಗ್ಯ ಮತ್ತು ಅಪಾಯವನ್ನು ಉಂಟು ಮಾಡುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆಹಾರ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲಿ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles