ನವದೆಹಲಿ: ದೇಶಾದ್ಯಂತ ಏರ್‌ಟೆಲ್ ಇನ್‌ಟರ್‌ನೆಟ್ ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ ಕಾಣಿಸಿಕೊಂಡಿದೆ ಎಂದು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ಈ ತೊಂದರೆ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿರುವ ಕಂಪೆನಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.
ಏರ್ ಟೆಲ್ ಬ್ರಾಡ್ ಬ್ಯಾಂಡ್ ಕಾರ್ಯಾಚರಣೆ ನಿಲ್ಲಿಸಿದ್ದು, ನಮಗೆ ಮೊಬೈಲ್ ಫೋನ್‌ಗಳಲ್ಲಿ ಕರೆಗಳನ್ನು ಮಾಡಲಾಗುತ್ತಿಲ್ಲ, ಕರೆಗಳನ್ನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ #Airteldown ಎಂದು ಹ್ಯಾಶ್ ಟ್ಯಾಗ್ ಮಾಡುವ ಮೂಲಕ ಗ್ರಾಹಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದೆ ಎಂದು ಕಂಪೆನಿಯು ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಂಪೆನಿಯು ನಮ್ಮ ಇಂಟರ್‌ನೆಟ್ ಸೇವೆಗಳು ಅಲ್ಪಾವಧಿಯ ಅಡಚಣೆಯನ್ನು ಹೊಂದಿದ್ದವು. ಇದರಿಂದ ನಿಮಗೆ ಉಂಟಾದ ತೊಂದರೆಗಾಗಿ ವಿಷಾದಿಸುತ್ತೇವೆ. ಗ್ರಾಹಕರಿಗೆ ತಡೆರಹಿತ ಸೇವೆ ನೀಡಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಈಗ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದೆ.
ದೆಹಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ್, ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.