ಕುಂದಾಪುರ: ಸೌಕೂರು ಹಬ್ಬಕ್ಕಾಗಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್ ವಿದ್ಯುತ್ ತಂತಿಗೆ ತಗುಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಸೌಕೂರು ದೇವಸ್ಥಾನದ ಸಮೀಪ ನಡೆದಿದೆ.
ಸೌಕೂರು ನಿವಾಸಿ ಮೋಹನ ದೇವಾಡಿಗ ಅವರ ಪುತ್ರ ಪ್ರಶಾಂತ ದೇವಾಡಿಗ (26) ಸಾವನ್ನಪ್ಪಿದ ಯುವಕ. ಹಾಗೂ ಶ್ರೀಧರ ದೇವಾಡಿಗ(45) ಗಂಭೀರ ಗಾಯಗೊಂಡ ಯುವಕ. ಶನಿವಾರ ನಡೆಯಲಿರುವ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಶುಕ್ರವಾರ ರಾತ್ರಿ ಹಬ್ಬಕ್ಕೆ ಶುಭಕೋರುವ ತಮ್ಮದೇ ಬ್ಯಾನರ್ಅನ್ನು ಅಳವಡಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪ್ಲೆಕ್ಸ್ ಕಟ್ಟುತ್ತಿದ್ದ ಸ್ಥಳದ ಸಮೀಪವೇ ಟ್ರಾನ್ಸ್ಫಾರ್ಮರ್ ತಂತಿ ಹಾದು ಹೋಗಿದ್ದು ಇದರ ಅರವಿಗೆ ಬಾರದೇ ಯುವಕರು ಫ್ಲೆಕ್ಸ್ ಮೇಲಕ್ಕೆತ್ತಿ ಕಟ್ಟುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ಫ್ಲೆಕ್ಸ್ಗೆ ತಗುಲಿ ಯುವಕರಿಗೆ ವಿದ್ಯುತ್ ಶಾಕ್ ತಗುಲಿದೆ.
ಕೂಡಲೇ ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಶಾಂತ ದೇವಾಡಿಗ ಕೊನೆಯುಸಿರೆಳೆದಿದ್ದು, ಶ್ರೀಧರ್ ಅವರು ಗಂಭೀರ ಗಾಯಗೊಂಡಿದ್ದರು. ಶ್ರೀಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.