ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅಮೂಲ್ಯ ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 11.45ಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
‘ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಮೂಲ್ಯ 2017 ರಲ್ಲಿ ಜಗದೀಶ್ ಅವರೊಂದಿಗೆ ಹಸೆಮಣೆ ಏರಿದ್ದರು. ಅಮೂಲ್ಯ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಕೊನೆ ಚಿತ್ರ ಮಾಸ್ತಿಗುಡಿ. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಗುಳುನಗೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಸ್ಯಾಂಡಲ್ವುಡ್ ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮುಂತಾದವರು ಹಾಗೂ ಅಭಿಮಾನಿಗಳು ಅಮೂಲ್ಯ ಮತ್ತು ಜಗದೀಶ್ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.