ನವದೆಹಲಿ: ಉಕ್ರೇನ್‌ನಲ್ಲಿರುವ ವಿ.ವಿ.ಗಳಲ್ಲಿ ಅಧ್ಯಯನ ಮಾಡುತ್ತಿರುವ ತಮ್ಮ ಹಲವು ಸ್ನೇಹಿತರು ನಾಪತ್ತೆಯಾಗಿದ್ದಾರೆ ಅವರು ನಮ್ಮ ಸಂಪರ್ಕಕಕ್ಕೂ ಸಿಗುತ್ತಿಲ್ಲವೆಂದು ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ಭಾರತದಲ್ಲಿರುವ ವಿದ್ಯಾರ್ಥಿಗಳ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.
ಡೊನೆಸ್ಟ್ಕ್ ರಾಷ್ಟ್ರೀಯ ವೈದ್ಯಕೀಯ ವಿ.ವಿಯ ವಿದ್ಯಾರ್ಥಿ ಆಶಿತಾ ಭಾರದ್ವಾಜ್ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಿಲ್ಲ ಆಶಿತಾ ಕೂಡ ಮನೆಯವರನ್ನು ಸಂಪರ್ಕಿಸುತ್ತಿಲ್ಲ ಎಂದು ಆಕೆಯ ಸಹೋದರಿ ಶಿವಾಂಗಿ ತಿಳಿಸಿದ್ದಾರೆ. ಆಶಿತಾ ಪೋಲೆಂಡ್ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಳು ಎನ್ನಲಾಗಿದೆ.
ಖಾರ್ವಿಕ್ ರಾಷ್ಟ್ರೀಯ ಮೆಡಿಕಲ್ ವಿ.ವಿ.ಯ ಹಲವು ವಿದ್ಯಾರ್ಥಿಗಳು ಕಾಣೆಯಾಗಿದ್ದು, ಇವರ ಕುರಿತು ಮಾಹಿತಿ ತಿಳಿದುಬಂದರೆ ಆಗಾಗ ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿ ನೀಡುತ್ತಾರೆ ಎಂದು ಅದೇ ವಿ.ವಿ.ಯ ವಿದ್ಯಾರ್ಥಿ ಸಾಹಿಲ್ ಲತ್ ವಾಲ್ ತಿಳಿಸಿದ್ದಾರೆ.
ಖಾರ್ವಿಕ್ ರಾಷ್ಟ್ರೀಯ ಮೆಡಿಕಲ್ ವಿ.ವಿ.ಯಲ್ಲಿ ಓದುತ್ತಿರುವ ಹರ್ಯಾಣದ ಪ್ರೇಮ್ ಸಿಂಗ್(ಹೆಸರು ಬದಲಿಸಲಾಗಿದೆ) ಕೂಡ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಾಹಿಲ್ ಹೇಳಿದ್ದಾರೆ.
ವಿನ್ನಿಟ್ಸಿಯಾದ ರಾಷ್ಟ್ರೀಯ ಪಿರೊಗೊವ್ ಮೆಡಿಕಲ್ ವಿ.ವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಬ್ದುಲ್(ಹೆಸರು ಬದಲಾಯಿಸಲಾಗಿದೆ) ಕೂಡ ಕಾಣೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಹಪಾಠಿ ತಿಳಿಸಿದ್ದಾರೆ. ಅಬ್ದುಲ್ ಪೋಲೆಂಡ್ ಗಡಿಯತ್ತ ಹೊರಟಿದ್ದರು ಎಂದು ತಿಳಿದುಬಂದಿದೆ.
ಪೋಲೆಂಡ್ ಗಡಿಭಾಗಕ್ಕೆ ತೆರಳಿರುವ ಹಲವು ವಿದ್ಯಾರ್ಥಿಗಳ ಫೋನ್‌ಗಳು ಸಂಪರ್ಕ ಕಳೆದುಕೊಂಡಿವೆ. ಅವರ ಫೋನ್‌ಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತೆಗೆದಿಟ್ಟುಕೊಂಡಿದ್ದಾರೆ ಎಂದು ಗಡಿಭಾಗದಲ್ಲಿ ಭಾರತಕ್ಕೆ ಮರಳಲು ಕಾಯುತ್ತಿರುವ ಸಂದೀಪ್ ಕೌರ್ ತಿಳಿಸಿದ್ದಾರೆ.