ಶ್ರೀನಗರ: ಉತ್ತರ ಕಾಶ್ಮೀರದ ಗುರೆಜ್ ವಲಯದಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಭಾರತ ಸೇನೆಯ ಚೀತಾ ಹೆಲಿಕಾಪ್ಟರ್ ಶುಕ್ರವಾರ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಇದ್ದು, ಓರ್ವ ಪೈಲಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೆಲವು ಗಡಿ ಭದ್ರತಾ ಪಡೆ ಸಿಬ್ಬಂದಿಗಳು ಅಸ್ವಸ್ಥಗೊಂಡಿದ್ದ ಹಿನ್ನಲೆಯಲ್ಲಿ ಅವರನ್ನು ಕರೆ ತರಲು ಈ ಹೆಲಿಕಾಪ್ಟರ್ ಹೊರಟಿತ್ತು. ಆದರೆ ಗುರೆಜ್ ವಲಯದ ಗುರ್ಜನ್ ನಲ್ಲಾ ಬಳಿ ಪತನಗೊಂಡಿದ್ದು, ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುವನ್ನು ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಪತನದ ಕುರಿತು ತನಿಖೆ ನಡೆಸಲಾಗುತ್ತಿದೆ. ಪತನಗೊಂಡ ಪ್ರದೇಶ ಸಂಪೂರ್ಣ ಹಿಮಾಚ್ಛಾದಿತವಾಗಿದ್ದ ಕಾರಣ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ಸ್ಥಳಕ್ಕೆ ಹಿರಿಯ ಸೇನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.