ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರು ಸಹ ಕುಸ್ತಿಪಟುವನ್ನು ಕೊಲೆ ಮಾಡಿದ ಹಿನ್ನಲೆಯಲ್ಲಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಅವರು ಸಹ ಖೈದಿಗಳಿಗೆ ಕುಸ್ತಿ ಮತ್ತು ಫಿಟ್ನೆಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಶೀಲ್ ಕುಮಾರ್ ಅವರು ಜೈಲಿನ ಆವರಣದೊಳಗೆ ತರಬೇತಿ ನೀಡುತ್ತಿದ್ದು, ತರಗತಿಗಳಿಗೆ ಕನಿಷ್ಠ 10 ಮಂದಿ ಸಹ ಖೈದಿಗಳು ಸೇರಿದ್ದಾರೆ. ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರು ಸಹ ಸುಶೀಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿರುವುದಾಗಿ ವರದಿಯಾಗಿದೆ.
ಈ ಹಿಂದೆ ತಿಹಾರ್ ಜೈಲಿನ ಆಡಳಿತವು ಸುಶೀಲ್ ಕುಮಾರ್ ಅವರನ್ನು ಜೈಲಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಿತ್ತು. ದೆಹಲಿಯಲ್ಲಿ ಮೂರನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ಸುಶೀಲ್ ಕುಮಾರ್ ಅವರು ಒಬ್ಬರೇ ವ್ಯಾಯಾಮ ಮಾಡುತ್ತಿದ್ದರು. ಇದೀಗ ಕೋವಿಡ್ ಪ್ರಕರಣ ಇಳಿಕೆಯಾದ ಹಿನ್ನಲೆಯಲ್ಲಿ ಸಹ ಖೈದಿಗಳಿಗೆ ಕುಸ್ತಿ ಹಾಗೂ ಫಿಟ್ನೆಸ್ ತರಬೇತಿ ನೀಡುತ್ತಿದ್ದಾರೆ.