ಮಂಗಳೂರು: ಬೈಕ್ ಚಲಾಯಿಸುತ್ತಲೇ ಅಪಾಯಕಾರಿ ವೀಲಿಂಗ್ ಸ್ಟಂಟ್ ಮಾಡುತ್ತಿದ್ದ ನಾಲ್ವರ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಯಾಸ್ ಝಿಯಾನ್ ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಇಲ್ಯಾಸ್ ಮತ್ತು ಬೈಕ್ ಮಾಲಕ ಹಾಗೂ ವಿಡಿಯೋ ಶೂಟ್ ಮಾಡಿದ ಸಫ್ವಾನ್ ವಿರುದ್ದ ಪ್ರಕರಣ ದಾಖಲಾಗಿದೆ. ಇತರ ವಾಹನ, ಪಾದಚಾರಿಗಳಿಗೆ ಅಪಾಯವಾಗುವ ರೀತಿ ಬೈಕ್ ಚಲಾಯಿಸಿದ ಇವರ ವರ್ತನೆಗೆ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಇಲ್ಯಾಸ್ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲಬೈಲ್ ವರೆಗೆ ಬೈಕ್ನಲ್ಲಿ ಅಪಾಯಕಾರಿ ವೀಲಿಂಗ್ ಸ್ಟಂಟ್ ಮಾಡಿದ್ದಾನೆ. ನಾಗುರಿಯಿಂದ ಸಂಚಾರಿ ದಕ್ಷಿಣ ಪೊಲೀಸ್ ಠಾಣೆವರೆಗೆ ಇಲ್ಯಾಸ್ ಇಬ್ಬರನ್ನು ಕುಳ್ಳಿರಿಸಿಕೊಂಡು ಬೈಕ್ನಲ್ಲಿ ಸ್ಟಂಟ್ ಮಾಡಿದ್ದಾನೆ.
ಈ ಪ್ರಕರಣವಷ್ಟೇ ಅಲ್ಲದೆ ಮತ್ತೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ. ವೀಲಿಂಗ್ ಮಾಡುತ್ತಿದ್ದ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ಉಳ್ಳಾಲದಲ್ಲಿ ವೀಲಿಂಗ್ ಮಾಡಿದ ತೌಸೀಫ್, ಅಡ್ಯಾರ್ ಸಮೀಪ ವೀಲಿಂಗ್ ಮಾಡಿದ ಕಿಶನ್ ಶೆಟ್ಟಿ, ವಾಮಂಜೂರಿನಲ್ಲಿ ವೀಲಿಂಗ್ ಮಾಡಿದ ಆನೀಝ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.