ನಲ್ಗೊಂಡ: ಕೆಲವರಿಗೆ ನಾನ್‌ವೆಜ್ ತಿನ್ನದೇ ಹೋದರೆ ಏನನ್ನೊ ಕಳೆದುಕೊಂಡಂತೆ ಚಡಪಡಿಸುತ್ತಿರುತ್ತಾರೆ. ಆದರೆ ಇದೇ ನಾನ್‌ವೆಜ್ ನಿಂದಾಗಿ ವ್ಯಕ್ತಿಯೊಬ್ಬ ಜೈಲು ಸೇರಿದ್ದಾನೆ. ಹೆಂಡತಿ ಮಟನ್ ಕರಿ ಮಾಡದ ಕಾರಣ ಗಂಡ ಜೈಲು ಸೇರಿದ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದಿದೆ.
ನವೀನ್ ಕುಡಿದ ಮತ್ತಿನಲ್ಲಿ ರಾತ್ರಿ ಮನೆಗೆ ಬಂದಿದ್ದು, ಹೆಂಡತಿ ತನ್ನ ಆದೇಶದಂತೆ ಮಟನ್ ಕರಿ ಮಾಡಿಲ್ಲ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಪೊಲೀಸ್ ನಿಯಂತ್ರಣ ಕೊಠಡಿ ನಿರ್ವಾಹಕರು ಆತ ತಮಾಷೆ ಮಾಡುತ್ತಿದ್ದಾನೆಂದು ಭಾವಿಸಿ ಸುಮ್ಮನಾಗಿದ್ದಾರೆ. ಆದರೆ ನವೀನ್ ಮತ್ತೆ 5ಬಾರಿ ಕರೆ ಮಾಡಿದ್ದರಿಂದ ಕೋಪಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಸಹಾಯವಾಣಿಗೆ 6 ಬಾರಿ ಕರೆ ಮಾಡಿದ ನವೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 290 ಮತ್ತು 510ರ ಅಡಿಯಲ್ಲಿ ದೂರು ದಾಖಲಿಸಿದ್ದು, ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.