ಕುಂದಾಪುರ: ಅಪ್ರಾಪ್ತ ಬಾಲಕರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ. ಹೆಮ್ಮಾಡಿ ದೋಷಿ ಎಂದು ಉಡುಪಿ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಒಂದನೇ ಪ್ರಕರಣದಲ್ಲಿ ಸಂತ್ರಸ್ತ 15 ವರ್ಷದ ಬಾಲಕನನ್ನು ಶಾಲೆಯಲ್ಲಿ ಹಾಡುಗಾರನೆಬಂತೆ ಪರಿಚಯಿಸಿಕೊಂಡ ಆರೋಪಿ ಬಾಲಕ ಶಾಲಾ ಆಟದ ಮೈದಾನದಲ್ಲಿರುವಾಗ ಬೈಕ್ ಸವಾರಿ ಮಾಡಿಸುವ ನೆಪದಲ್ಲಿ ಆತನನ್ನು ಶೌಚಾಲಯದೊಳಕ್ಕೆ ಕರೆಯಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ. ನೊಂದ ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರ ಚಂದ್ರ ಕೆ. ಹೆಮ್ಮಾಡಿ ಅಪರಾಧಿಯೆಂದು ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿಗೆ 10ವರ್ಷ ಕಠಿಣ ಸಜೆ ಹಾಗೂ ನೊಂದ ಬಾಲಕನಿಗೆ 25 ಸಾವಿರ ದಂಡ ನೀಡಲು ಆದೇಶಿಸಿದೆ.
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಚಂದ್ರ ಕೆ. ಹೆಮ್ಮಾಡಿ 13 ವರ್ಷದ ಸಂತ್ರಸ್ತ ಬಾಲಕನನ್ನು ಪರಿಚಯಿಸಿಕೊಂಡು ಗುಹೆ ಫೋಟೋ ತೆಗೆಯಲು ಹೋಗುವುದಿದೆ ಎಂದು ಸ್ನೇಹಿತನೊಂದಿಗೆ ಬೈಕಿನಲ್ಲಿ ಕರೆದೊಯ್ದಿದ್ದಾನೆ. ಸ್ನೇಹಿತನಿಗೆ ಆಟವಾಡಲು ಮೊಬೈಲ್ ನೀಡಿ ಬಾಲಕನನ್ನು ಗುಹೆಯೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿತ್ತು. ನೊಂದ ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರ ಅಪರಾಧಿಗೆ 5 ವರ್ಷ ಕಠಿಣ ಸಜೆ ಹಾಗೂ ನೊಂದ ಬಾಲಕನಿಗೆ 25 ಸಾವಿರ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
ಈ ಎರಡು ಪ್ರತ್ಯೇಕ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಅಂದಿನ ಬೈಂದೂರು ಸಿಪಿಐ ಪರಮೇಶ್ವರ ಆರ್. ಗುನಗ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇನ್ನು 18 ಪ್ರಕರಣಗಳು ವಿಚಾರಣೆಗೆ ಬಾಕಿ
ಆರೋಪಿ ಚಂದ್ರ ಕೆ. ಹೆಮ್ಮಾಡಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಒಟ್ಟು 21 ಪ್ರಕರಣ ದಾಖಲಾಗಿತ್ತು. ಅವುಗಳ ಪೈಕಿ ಈ ಹಿಂದೆ ಒಂದು ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದ್ದು ಇದು ಶಿಕ್ಷೆಗೊಳಪಟ್ಟ 3ನೇ ಪ್ರಕರಣವಾಗಿದೆ. ಇನ್ನು 18 ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ.