ಮಂಗಳೂರು: ಮುಸ್ಲಿಂ ಸಂಘಟನೆಯೊAದರಿAದ ಮಂಗಳೂರಿನಲ್ಲಿ ತಾಲಿಬಾನ್ ರೀತಿಯ ಸಂಸ್ಕೃತಿ ಹೇರಿಕೆ ಮಾಡಲು ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದು, ಬುರ್ಖಾ ಧರಿಸಿ ಹಿಂದೂ ಯುವಕರೊಂದಿಗೆ ಪಾರ್ಕ್, ಮಾಲ್, ಥಿಯೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡಿ ಅವರಿಗೆ ಮುಸ್ಲಿಂ ಡಿಫೆನ್ಸ್ ಫೋರ್ಸ್(ಎಂಡಿಎಫ್) ಬೆದರಿಕೆ ಹಾಕಿದೆ.
ಸಂಘಟನೆಗಳು ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ನಿಗೂಢವಾಗಿ ಕಾರ್ಯಚರಣೆಯನ್ನು ಮಾಡುತ್ತಿವೆ. ಈ ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿದ್ದು, ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದೆ. ಈ ಯುವತಿಯರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯ ಸಂದೇಶವನ್ನು ಹರಿ ಬಿಡಲಾಗಿದೆ.
ಸಿಟಿ ಸೆಂಟರನ ಕಾರ್ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬುರ್ಖಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿ ಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಆದ್ದರಿಂದ ಇನ್ಮುಂದೆ ಇಂತಹ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ, ಧರ್ಮದೇಟು ಕೊಟ್ಟು ಯಾವುದೇ ಮುಲಾಜಿಲ್ಲದೆ ಕಾರ್ಯ ನಿರ್ವಹಿಸಲಿದ್ದೇವೆ. ಆದ್ದರಿಂದ ಪೋಷಕರೆ ನಿಮ್ಮ-ನಿಮ್ಮ ಮಕ್ಕಳ ಚಲನವಲನಗಳನ್ನು ಪರಿಶೀಲನೆ ಮಾಡಿ ಎಂಬ ಪೋಸ್ಟ್ಗಳನ್ನು ಎಂಡಿಎಫ್ ಹಾಕುತ್ತಿದೆ.
ಎಂಎಫ್‌ಡಿ ಹಾಗೂ ಮಂಗಳೂರು ಮುಸ್ಲಿಂ ಪೇಜ್ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಸೋಶಿಯಲ್ ಮೀಡಿಯಾ ಮೇಲೆ ತೀವ್ರ ನಿಗಾವನ್ನು ಇಡಲು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಡಿಸಿಪಿ ಹರಿರಾಂ ಶಂಕರ್ ನೇತತ್ವದಲ್ಲಿ ೬ ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದಾರೆ. ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಗಮನವನ್ನು ಹರಿಸುತ್ತಿದೆ.
ಈ ಕುರಿತು ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಬುರ್ಖಾ ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮಾಡಿದರೆ ದಾಳಿ ಮಾಡಿ ಧರ್ಮದೇಟು ನೀಡುತ್ತೇವೆ ಎಂದು ಬೆದರಿಕೆ ಹಾಕಿದ ತಂಡದ ವಿರುದ್ಧ ತನಿಖೆ ಶುರು ಮಾಡಲಾಗಿದೆ ಎಂದರು.