ಮಂಗಳೂರು: ಅನ್ಯಕೋಮಿನ ಯುವಕನ ಕಿರುಕುಳಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ವಿದ್ಯಾರ್ಥಿನಿಯದ್ದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಮತ್ತು ಹಿಂದೂ ಮುಖಂಡರು ಭಾಗಿಯಾಗಿದ್ದಾರೆ. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನ್ ದಾಸ್ ಸ್ವಾಮೀಜಿ ಹಾಗೂ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಇತ್ತೀಚೆಗೆ ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮಿಕಾ(14) ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತನ ಕಿರುಕುಳದಿಂದ ಆತ್ಮಿಕಾ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಶಾಹುಲ್ ಹಮೀದ್ ಎಂಬಾತನನ್ನು ವಿಟ್ಲ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು, ಲವ್ ಜಿಹಾದ್ಗೆ ಬಾಲಕಿ ಬಲಿ ಎಂದು ಆರೋಪಿಸಿರುವ ವಿಶ್ವ ಹಿಂದು ಪರಿಷತ್, ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದೆ.