ಮಂಗಳೂರು: ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಫಿಸಿಯೋಥೆರಪಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ.
ಕಣ್ಣೂರಿನ ಆಝಿಕ್ಕೋಡ್ ನಿವಾಸಿ ಸಾಂದ್ರಾ ಪಿ.ಪಿ. (21) ಮೃತ ಯುವತಿ. ಬುಧವಾರ ಬೆಳಗ್ಗೆ 10 ರಿಂದ 12 ರ ನಡುವೆ ಲೇಡಿಸ್ ಹಾಸ್ಟೆಲ್ ಕೊಠಡಿಯಲ್ಲಿ ಕೃತ್ಯ ನಡೆದಿದೆ. ಸಾವಿಗೆ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಆಕೆ ಒಂದು ವರ್ಷದಿಂದ ಖಿನ್ನತೆಗೆ ಒಳಗಾಗಿದ್ದು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೇ ಹಿನ್ನೆಲೆ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಇದೇ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೊಠಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕೇರಳ ಮೂಲದ ರೋಶನ್ (23) ಎಂಬಾತ ಮೃತ ಯುವಕನಾಗಿದ್ದು, ಮಗ ಫೋನ್ ಸ್ವೀಕರಿಸುತ್ತಿಲ್ಲ ಎಂದು ಹೆತ್ತವರು ಕಾಲೇಜು ಆಡಳಿತಕ್ಕೆ ಮಾಹಿತಿ ಕೇಳಿದ್ದರು. ಬಳಿಕ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಆತನಿಗೆ ಅಸ್ತಮಾ ತೊಂದರೆಯೂ ಇತ್ತು ಎನ್ನಲಾಗಿದ್ದು ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದರು. ಇದೀಗ ಅದೇ ಕಾಲೇಜಿನ ಮತ್ತೊಬ್ಬ ಹುಡುಗಿ ನಿಗೂಢವಾಗಿ ಸಾವಿಗೆ ಶರಣಾಗಿದ್ದಾಳೆ.