ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೋನಾ ಹಾಗೂ ರೂಪಾಂತರಿ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಆದರೆ ವಾಷಿಂಗ್ಟನ್ ನಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ. ಆಶ್ಚರ್ಯವೆಂಬಂತೆ ಇದರಿಂದ ವಿಮಾನವೇ ಮಾರ್ಗಮಧ್ಯೆ ಹಿಂತಿರುಗಿ ಬರುವಂತಾಗಿದೆ.
ಗುರುವಾರ ಮಿಯಾಮಿ ಇಂದ ಲಂಡನ್ಗೆ ತೆರಳುತ್ತಿದ್ದ ಅಮೆರಿಕಾದ ಏರ್ಲೈನ್ಸ್ ಜೆಟ್ಲೈನರ್ ಮಾರ್ಗಮಧ್ಯೆ ವಾಪಸಾಗಿದೆ. ಈ ವಿಮಾನದಲ್ಲಿ ಚಲಿಸುತ್ತಿದ್ದ ಪ್ರಯಾಣಿಕನೊಬ್ಬ ಮಾಸ್ಕ್ ಧರಿಸಲು ನಿರಾಕರಿಸಿದ ಕಾರಣ ಈ ಘಟನೆ ನಡೆದಿದೆ ಎಂದು ಏರ್ಲೈನ್ ಸಂಸ್ಥೆ ತಿಳಿಸಿದೆ. 129 ಪ್ರಯಾಣಿಕರನ್ನು ಹಾಗೂ 14 ಸಿಬ್ಬಂದಿಗಳನ್ನು ಹೊಂದಿದ್ದ ಏರ್ಲೈನ್ ಬೋಯಿಂಗ್ 777 ವಿಮಾನ ಲ್ಯಾಂಡ್ ಆಗುವ ವೇಳೆಗೆ ಪೊಲೀಸರು ಆ ಪ್ರಯಾಣಿಕನನ್ನು ಬಂಧಿಸಲು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ವಿಮಾನ ಲ್ಯಾಂಡ್ ಆದ ನಂತರ ಪ್ರಯಾಣಿಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಈ ಪ್ರಯಾಣಿಕನ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಅಮೆರಿಕಾದ ಏರ್ಲೈನ್ಸ್ ತಿಳಿಸಿದೆ.