ಉಜ್ಜಯನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್ ನಗರ ತಾಲೀಕಿನ ಕಲ್ಮೋರಾ ಗ್ರಾಮದಲ್ಲಿ ಒಂದು ಸಾವಿರ ವರ್ಷದ ಹಿಂದಿನ ಪರ್ವರ್ ಆಳ್ವಿಕೆ ಕಾಲದ ಶಿವಾಲಯ ಪತ್ತೆಯಾಗಿದೆ.
ಪರ್ವರ್ ಆಳ್ವಿಕೆ ಕಾಲದ ಶಿವಾಲಯವಾಗಿದ್ದು, ಉತ್ಖನನ ಮುಂದುವರಿದಿದೆ ಎಂದು ವಕಾಂಕರ್ ಸಂಶೋಧನಾ ಸಂಸ್ಥೆಯ ತಜ್ಞ ಡಾ.ವಿಷ್ಣು ಶ್ರೀಧರ್ ತಿಳಿಸಿದ್ದಾರೆ.
ಶಿವಾಲಯವು ಪೂರ್ವಾಭಿಮುಖವಾಗಿದ್ದು, 15 ಮೀಟರ್ ಅಗಲ, 9 ಅಡಿ ಎತ್ತರವಿದೆ. ಭಗ್ನಗೊಂಡ ಮಂಟಪ, ಗರ್ಭಗುಡಿ, ಶಿವಲಿಂಗ, ವಿಷ್ಣು ಮೂರ್ತಿ ಇನ್ನಿತರ ವಿಗ್ರಹಗಳು ಪತ್ತೆಯಾಗಿದೆ. 15 ದಿನಗಳ ಹಿಂದೆ 2ನೇ ಹಂತದಲ್ಲಿ ಭೂಮಿ ಅಗೆಯುತ್ತಿದ್ದ ವೇಳೆ ಶಿವಾಲಯದ ಮಾದರಿ ಗೋಚರಿಸಿತು ಎಂದು ವಕಾಂಕರ್ ಸಂಸ್ಥೆಯ ತಜ್ಞ ಡಾ.ಧುವೇಂದ್ರ ಜೋಧಾ ತಿಳಿಸಿದ್ದಾರೆ.
ಈ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಸಮೀಕ್ಷೆ ನಡೆಸುತ್ತಿದ್ದಾಗ 12 ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪರ್ವರ್ ರಾಜವಂಶಸ್ಥರ ಕಾಲದ ಭೂಮಿಜ್ ಶೈಲಿಯ ದೇವಾಲಯದ ಕುರುಹು ಪತ್ತೆಯಾಗಿತ್ತು. ಈ ಕುರಿತು ಮಧ್ಯಪ್ರದೇಶದ ಪುರಾತತ್ವ ಇಲಾಖೆ ಅಧ್ಯಯನ ನಡೆಸಿ ಉತ್ಖನನ ಪ್ರಾರಂಭಿಸಿತು.


