ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಸುಮಾರು 3 ತಿಂಗಳುಗಳಾಗುತ್ತಾ ಬಂದಿದೆ. ಆದರೆ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ನೆನಪು ಮಾಡಿಕೊಳ್ಳುವ ಕೆಲಸ ಹಾಗೂ ಅವರಿಗೆ ಗೌರವ ಸೂಚಿಸುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದೀಗ ಅಮೇಜಾನ್ ಪ್ರೈಮ್ ಪುನೀತ್ ನಿರ್ಮಾಣದ ಹಾಗೂ ಅವರು ನಟಿಸಿದ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುವ ಮೂಲಕ ಗೌರವ ಸೂಚಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಓಟಿಟಿಯಲ್ಲಿಯೂ ಸಹ ಬಿಡುಗಡೆಯಾಗುತ್ತಿದೆ. ಒಟಿಟಿ ಪ್ಲಾಟ್ಫಾರ್ಮ್ಗಳು ತನ್ನತ್ತ ಗಮನ ಸೆಳೆಯಲು ಹಲವಾರು ತಂತ್ರಗಳನ್ನು ಉಪಯೋಗಿಸುತ್ತಲಿವೆ. ಇದೀಗ ಅಮೇಜಾನ್ ಪ್ರೈಮ್ ವೀಕ್ಷಕರಿಗೆ ಬಂಪರ್ ಆಫರ್ ನೀಡುವ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದಿದೆ.
ಪುನೀತ್ ನಿರ್ಮಾಣದ ‘ಕವಲುದಾರಿ’, ‘ಮಾಯಾ ಭಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಹಾಗೂ ಪುನೀತ್ ನಟನೆಯ ಯುವರತ್ನ ಈ ಐದು ಸಿನಿಮಾಗಳನ್ನು ಅಮೇಜಾನ್ ಪ್ರೈಮ್ ನಲ್ಲಿ ಫೆ.1 ರಿಂದ ಫೆ. 28 ರ ವರೆಗೆ ಉಚಿತವಾಗಿ ವೀಕ್ಷಿಸಬಹುದಾದ ಅವಕಾಶ ನೀಡಿದೆ. ಇವರ ನಿರ್ಮಾಣದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗುತ್ತಲಿದ್ದು, ಇದರ ಜೊತೆಗೆ ಈ ಐದು ಸಿನಿಮಾಗಳು ಉಚಿತ ವೀಕ್ಷಣೆಗೆ ಸಿಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.