ಕುಂದಾಪುರ: ಪ್ರೀತಿಸಿ ಮದುವೆಯಾದ ಪತ್ನಿ ಗರ್ಭಿಣಿ ಎಂದೂ ಲೆಕ್ಕಿಸದೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಿರುಕುಳ ನೀಡಿದ ಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆ ಬೀಜಾಡಿ ನಿವಾಸಿ ಪ್ರಿಯಾಂಕ(21) ಕಿರುಕುಳಕ್ಕೊಳಗಾಗಿದ್ದು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರದೀಪ್ ಹಾಗೂ ಪ್ರಿಯಾಂಕ ಪರಸ್ಪರ ಪ್ರೀತಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊಲ್ಲೂರಿನಲ್ಲಿ ಮದುವೆಯಾಗಿದ್ದರು. ಮದುವೆಯ ಬಳಿಕ ಪ್ರಿಯಾಂಕ ತನ್ನ ಪತಿ ಮನೆಯಲ್ಲೇ ನೆಲೆಸಿದ್ದು, ಮದುವೆಯಾಗಿ ನಾಲ್ಕೈದು ತಿಂಗಳಾದ ನಂತರ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದು, ನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತರುವಂತೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಪ್ರದೀಪ್ ತನ್ನ ಪತ್ನಿ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಪತ್ನಿ ಪ್ರಿಯಾಂಕಗೆ ಪ್ರದೀಪ್ ಸಿಗರೇಟಿನಿಂದ ಸುಟ್ಟು, ಕಾಲಿನಿಂದ ತುಳಿದು, ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾನೆ. ಈ ವೀಡಿಯೋವನ್ನು ಪ್ರಿಯಾಂಕ ಹೆತ್ತವರಿಗೆ ಕಳುಹಿಸಿ 2ಲ್ಷಕ ರೂ ಮತ್ತು 4 ಪವನ್ ಚಿನ್ನ ನೀಡುವಂತೆ ಬೇಡಿಕೆ ಇಟ್ಟಿದ್ದಾನೆಂದು ದೂರಿನಲ್ಲಿ ಉಲ್ಲೇಖವಾಗಿದೆ.