ಚಿಕ್ಕ ಮಕ್ಕಳು ತುಂಬಾ ಸೂಕ್ಷ್ಮ ಆಗಿರುವುದರಿಂದ ದೊಡ್ಡವರು ತಿನ್ನುವ ಎಲ್ಲಾ ಆಹಾರಗಳು, ಪಾನೀಯಗಳು ಮಕ್ಕಳ ದೇಹಕ್ಕೆ ಹೊಂದಾಣಿಕೆ ಆಗುವುದಿಲ್ಲ. ಸಾಮಾನ್ಯವಾಗಿ ಕುಡಿಯಲು ಮಕ್ಕಳಿಗೆ ಹಾಲನ್ನು ಕೊಡುತ್ತೇವೆ. ಆದರೆ ಕೆಲವರು ಕಾಫಿ, ಟೀಯನ್ನು ನೀಡುತ್ತಾರೆ. ಇದನ್ನು ಮಕ್ಕಳಿಗೆ ಕುಡಿಯಲು ಕೊಡುವುದರಿಂದ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತದೆ. ಕಾಫಿ, ಟೀಯಲ್ಲಿ ಕೆಫಿನ್ ಅಂಶಗಳಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸಾಮಾನ್ಯವಾಗಿ ಕಾಫಿ, ಟೀಯನ್ನು ಪ್ರತಿದಿನ ಕುಡಿದು ಅಭ್ಯಾವಾದವರಿಗೆ ಒಂದು ಹೊತ್ತು ಕುಡಿಯದೇ ಇದ್ದರೂ ತಲೆ ನೋವು ಪ್ರಾರಂಭವಾಗುತ್ತದೆ. ಕಾಫಿ, ಟೀಯಲ್ಲಿರುವ ಕೆಫಿನ್ ಒಂದು ರೀತಿ ಡ್ರಗ್ಸ್ ನಂತೆ ಕೆಲಸ ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಇಂತಹ ಪಾನೀಯಗಳ ಅಭ್ಯಾಸದಿಂದ ದೂರ ಇಡುವುದು ಒಳ್ಳೆಯದು.
ಟೀ ಕಾಫಿ ಸೇವನೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು
- 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ 20 ವರ್ಷದೊಳಗಿನ ಮಕ್ಕಳು ಕಾಫಿ, ಟೀ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಕಾಫಿ, ಟೀಯಲ್ಲಿ ಕೆಫಿನ್ ನ ಅಂಶ ಇರುವುದರಿಂದ ಈ ತೊಂದರೆಗಳು ಉಂಟಾಗುತ್ತವೆ. ಈ ಅಧ್ಯಯನದಿಂದ ಟೀ ಕಾಫಿ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ದೃಢವಾಗಿದೆ.
- ಪ್ರತಿನಿತ್ಯ ಮಕ್ಕಳು ಕಾಫಿ ಟೀ ಕುಡಿಯುವುದರಿಂದ ಅವರ ಬೆಳವಣಿಗೆಯಲ್ಲಿ ಬದಲಾವಣೆಗಳಾಗುತ್ತವೆ. ಏಕಾಗ್ರತೆಯ ಕೊರತೆ, ನಿದ್ರಾ ಹೀನತೆ, ಅಧಿಕ ರಕ್ತದೊತ್ತಡದಂತಹ ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತವೆ.
- ಕಾಫಿ, ಟೀ ಯಲ್ಲಿರುವ ಕೆಫಿನ್ ಮಕ್ಕಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ತಜ್ಙರ ಪ್ರಕಾರ ಕೆಫಿನ್ ಒಂದು ರೀತಿಯ ವಿಷದಂತೆ ಕೆಲಸಮಾಡುತ್ತದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ನಿಧಾನವಾಗಿ ನಮ್ಮ ದೇಹವನ್ನು ಕೊಲ್ಲುತ್ತದೆ. ಅತಿಯಾಗಿ ಟೀ, ಕಾಫಿಯನ್ನು ಕುಡಿಯುವುದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಪ್ರತಿನಿತ್ಯ ನಾವು 10 ಗ್ರಾಂಗಿಂತ ಹೆಚ್ಚು ಕೆಫಿನ್ ಅಂಶವನ್ನು ಸೇವಿಸಿದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಪ್ರಾರಂಭವಾಗುತ್ತದೆ.
- ತಜ್ಙರ ಪ್ರಕಾರ ಕಾಫಿ, ಟೀಯನ್ನು ಮಕ್ಕಳಿಗೆ ನೀಡಿದರೆ ಮಕ್ಕಳ ಮೆದುಳಿನ ಮೇಲೆ ನೇರವಾಗಿ ಪರಿಣಾಮವನ್ನುಂಟುಮಾಡುತ್ತದೆ. ನಿಯಮಿತವಾಗಿ ಟೀ ಕಾಫಿಯನ್ನು ಮಕ್ಕಳಿಗೆ ನೀಡುವುದರಿಂದ ಭಯ, ಆತಂಕ, ಗೊಂದಲದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ .