ಕಾರ್ಕಳ: ಗೋಕಳ್ಳರು ಪೋಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಮಾಳ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತಿದ್ದರು. ಈ ಸಂದರ್ಭ ಗೋವುಗಳು ತುಂಬಿದ್ದ ಕಾರು ಹಾಗೂ ಆ ಕಾರಿಗೆ ರಕ್ಷಣೆ ನೀಡಲು ಬರುತಿದ್ದ ಬೈಕನ್ನು ರಸ್ತೆಗೆ ಬ್ಯಾರಿಕೇಡ್ ಹಾಕಿ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಆ ಸಂದರ್ಭ ದುಷ್ಕರ್ಮಿಗಳು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಗಾಯಗೊಂಡರೂ ಸಹ ಗೋಕಳ್ಳರ ಬೆನ್ನತ್ತಿದ್ದಾರೆ. ಈ ವೇಳೆ ಗೋವು ತುಂಬಿದ್ದ ಕಾರು ಪರಾರಿಯಾಗಿದೆ. ಬೈಕ್ ಸವಾರ ಬಿದ್ದು ಗಾಯಗೊಂಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಒರ್ವ ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.