ಇಂಡೋನೇಷ್ಯಾ: ಕೆಲವೊಮ್ಮೆ ಅದೆಷ್ಟೇ ಕ್ರೂರ ಪ್ರಾಣಿಯಾದರೂ ಪ್ರಾಣಸಂಕಟಕ್ಕೊಳಗಾಗುತ್ತವೆ. ಅವುಗಳನ್ನು ರಕ್ಷಿಸುವುದು ಮಾನವರಾದ ನಮ್ಮ ಕರ್ತವ್ಯವಾಗಿದೆ. ಇದೇ ರೀತಿ ಮೊಸಳೆಯ ಕುತ್ತಿಗೆ ಸಿಲುಕಿದ್ದ ಟೈರ್ಅನ್ನು 6 ವರ್ಷಗಳ ನಂತರ ತೆಗೆದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಂಡೋನೇಷ್ಯಾದ ತಿಲಿ ಎಂಬ ವ್ಯಕ್ತಿ ಮೊಸಳೆಯನ್ನು ಮರದ ದಿಮ್ಮಿಯ ಮೂಲಕ ಸೆರೆಹಿಡಿದು, ಕಣ್ಣಿಗೆ ಬಟ್ಟೆಯನ್ನು ಸುತ್ತಿ, ಗರಗಸದ ಮೂಲಕ ಟೈರ್ಅನ್ನು ತೆಗೆದಿದ್ದಾರೆ. 2018 ರಲ್ಲಿ ಈ ಮೊಸಳೆಯ ಕುತ್ತಿಗೆಗೆ ಟೈರ್ಸಿಲುಕಿದ್ದು, ಈ ಹಿಂದೆ ಹಲವರು ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್ ತೆಗೆಯಲು ಯತ್ನಿಸಿ ವಿಫಲರಾಗಿದ್ದರು.
“ನಾನು ಒಬ್ಬನೇ ಮೊಸಳೆಯನ್ನು ಸೆರೆಹಿಡಿದೆ. ಸ್ಥಳೀಯರ ಸಹಾಯ ಕೇಳಿದರೆ ಮೊಸಳೆಗೆ ಹೆದರಿ ಸಹಾಯ ಮಾಡಲು ಹಿಂಜರಿದರು. ಕೊನೆಗೆ ಮರದ ದಿಮ್ಮಿಗಳನ್ನು ಅಳವಡಿಸಿಕೊಂಡು ಮೊಸಳೆಯನ್ನು ಸೆರೆಹಿಡಿದು ಟೈರ್ ತೆಗೆದು ನೀರಿಗೆ ಬಿಡಲಾಯಿತು” ಎಂದು ಪ್ರಾಣಿ ಪ್ರಿಯ ತಿಲಿ ತಿಳಿಸಿದ್ದಾರೆ.
ಈ ಹಿಂದೆ ನ್ಯಾಷನಲ್ ಜಿಯೋಗ್ರಫಿಯ ನಿರೂಪಕರೊಬ್ಬರು ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್ ತೆಗೆಯಲು ಯತ್ನಿಸಿದ್ದರು ಆದರೆ ಮೊಸಳೆ ಕಣ್ಮರೆಯಾಗಿದ್ದು ಟೈರ್ ತೆಗೆಯಲು ವಿಫಲರಾಗಿದ್ದರು.