ಉಡುಪಿ: ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಸಹಯೋಗದಲ್ಲಿ, ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೋವಿಡ್ -19 ಮುನ್ನೆಚ್ಚರಿಕಾ ಡೋಸ್ ಅನ್ನು ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ತಪ್ಪದೇ ಪಡೆಯಬೇಕು. ಈಗಾಗಲೇ ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ನೀಡುವುದರಲ್ಲಿ ಹೆಚ್ಚಿನ ಪ್ರಗತಿ ಆಗಿದೆ. ಮುನ್ನೆಚ್ಚರಿಕಾ ಡೋಸ್ ನೀಡುವುದರಲ್ಲೂ ಸಂಪೂರ್ಣ ಗುರಿ ಸಾಧಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದ್ದು, ಇದೀಗ ಮೂರನೇ ಅಲೆಯು ಹರಡುತ್ತಿದೆ. ಆದ್ದರಿಂದ ಸರ್ಕಾರ ಸೂಚಿಸುವ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ಚಂದ್ರಶೇಖರ ಅಡಿಗ, ಡಾ.ವೇಣುಗೋಪಾಲ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.