ನವದೆಹಲಿ: ಕೊರೊನಾ ಬಿಕ್ಕಟ್ಟಿನ ಈ ಸಂದರ್ಭ ಅನೇಕರು ಕೆಲಸವನ್ನು ಕಳೆದುಕೊಂಡು ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಕಾರ್ಮಿಕ ರಾಜ್ಯ ವಿಮಾ ನಿಗಮ(ESIC) ಬಂಪರ್ ಆಫರ್ ಅನ್ನು ನೀಡಿದ್ದು, ತಮ್ಮ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಿದೆ.
ಕಾರ್ಮಿಕ ರಾಜ್ಯ ವಿಮಾ ನಿಗಮ(ESIC) ಬಾಕಿ ಇರುವ 3,800ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು, ನೋಂದಣಿ ಪ್ರಕ್ರಿಯೆಯು ಜನವರಿ 15 2022 ರಿಂದ ಪ್ರಾರಂಭವಾಗಿದೆ. ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಫೆಬ್ರವರಿ 15, 2022 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕಾರ್ಮಿಕ ರಾಜ್ಯ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್ http://www.esic.nic.in ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೇಲ್ದರ್ಜೆ ಕ್ಲರ್ಕ್ ವಿಭಾಗದಲ್ಲಿ 1700 ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಸ್ಟೆನೋಗ್ರಾಫರ್‌ನ 160 ಕ್ಕೂ ಅಧಿಕ ಹಾಗೂ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯ 1,930 ಕ್ಕೂ ಅಧಿಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯೋಮಿತಿಯನ್ನು 18-27 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಕಾರ್ಮಿಕ ರಾಜ್ಯ ವಿಮಾ ನಿಗಮದ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯನ್ನು ಈ ಬಾರಿ ಇಂಗ್ಲೀಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ, ಕೊಂಕಣಿ ಮತ್ತು ಕನ್ನಡ ಭಾಷೆಯಲ್ಲಿಯೂ ಕೂಡ ಪರೀಕ್ಷೆಯನ್ನು ಬರೆಯಬಹುದಾಗಿದೆ ಎಂದು ಹೇಳಲಾಗಿದೆ.
ಕಾರ್ಮಿಕ ರಾಜ್ಯ ವಿಮಾ ನಿಗಮ (ESIC) ದ ಯುಡಿಸಿ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ಇದರೊಂದಿಗೆ ಮೈಕ್ರೋಸಾಫ್ಟ್ ಆಫೀಸ್ ಹಾಗೂ ಡೇಟಾ ಬೇಸ್ ನಿರ್ವಹಣೆಯನ್ನು ತಿಳಿದುಕೊಂಡಿರಬೇಕು. ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೇ ಇವರಿಗೆ ಕಂಪ್ಯೂಟರ್‌ನಲ್ಲಿ ಟ್ರಾನ್ಸ್ಕ್ರಿಪ್ಶನ್ ಪರೀಕ್ಷೆಯೂ ಇರುತ್ತದೆ. ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು 10ನೇ ತರಗತಿ ಪಾಸಾಗಿರಬೇಕು ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನೀಡಲಾಗಿದೆ.