ಬೆಂಗಳೂರು:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2021 ನೇ ಸಾಲಿನ ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿಯನ್ನು ಅಹ್ವಾನಿಸಲಾಗಿದೆ. ಜನವರಿ 21 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಹೌದು, ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಬಂದ್ ಮಾಡುತ್ತಿರುವ ಹಿನ್ನೆಲೆ ಅವರ ತಿಂಗಳ ಸಂಬಳವನ್ನು ಏರಿಕೆ ಮಾಡಿರುವ ಸರ್ಕಾರ ಕೆಲಸದ ಅವಧಿಯನ್ನು 15ಗಂಟೆಗೆ ಏರಿಕೆ ಮಾಡಿದೆ. ಇದೀಗ 2021 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದು ಜನವರಿ 21ರೊಳಗಾಗಿ ಆಸಕ್ತರು ಅರ್ಜಿಯನ್ನು ಸಲ್ಲಿಸುವಂತೆ ಮಾಹಿತಿಯನ್ನು ನೀಡಲಾಗಿದೆ.
ಈಗಾಗಲೇ ಅಧಿಕ ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎನ್ನಲಾಗಿದೆ. ಉಳಿದಂತೆ ವಿದ್ಯಾರ್ಹತೆ ಹಾಗೂ ಸೇವಾವಿವರಗಳ ಆಧಾರದ ಮೇಲೆ ರಾಜ್ಯ ವ್ಯಾಪ್ತಿಯ ಮೆರಿಟ್ ಪಟ್ಟಿಯನ್ನು ತಯಾರಿಸಿ ಆ ಮುಖಾಂತರವಾಗಿ ಅಯಾ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ಆಯ್ಕೆಯ 10 ಕಾಲೇಜುಗಳಿಗೆ ಅನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಒಬ್ಬ ಅಭ್ಯರ್ಥಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಪೈಕಿ ಶೇ.15ನ್ನು ಪರಿಗಣಿಸಿ ಅದಕ್ಕೆ ಗಿರಿಷ್ಠ 25 ಅಂಕವನ್ನು ನೀಡಲಾಗುವುದು. ಅಂತೆಯೇ ಪಿ.ಹೆಚ್.ಡಿ, ನೆಟ್, ಕೆ-ಸೆಟ್ ಮತ್ತು ಎಂ.ಫಿಲ್ ಪದವಿಯನ್ನು ಹೆಚ್ಚುವರಿ ಪದವಿ ಎಂದು ಪರಿಗಣಿಸಲಿದ್ದು ಅವುಗಳಿಗೆ ಗರಿಷ್ಠ 12, 9 ಮತ್ತು 6 ಅಂಕಗಳನ್ನು ನೀಡಲಾಗುವುದು. ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ ಅನುಭವ ಹೊಂದಿದವರಿಗೆ ಒಂದು ವರ್ಷದ ಅನುಭವಕ್ಕೆ 3 ಅಂಕ ನೀಡಲಾಗುವುದು ಹಾಗೆಯೇ ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ 10 ಅಂಕಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಕೆಲಸದ ಅವಧಿಯನ್ನು 15 ಗಂಟೆಗೆ ಏರಿಸಿರುವುದರಿಂದ ಅನೇಕರು ಕೆಲಸವನ್ನು ಕಳೆದುಕೊಳ್ಳುತ್ತಾರೆ ಎನ್ನುವ ಅತಿಥಿ ಉಪನ್ಯಾಸಕರ ವಾದಕ್ಕೆ ಸ್ಪಷ್ಟನೆಯನ್ನು ನೀಡಿರುವ ಇಲಾಖೆ, ಅಭ್ಯರ್ಥಿಗಳ ಆಯ್ಕೆಯ ಕಾಲೇಜುಗಳಲ್ಲಿ ವಾರಕ್ಕೆ 15 ಗಂಟೆಗಳ ಕಾರ್ಯಭಾರ ಇಲ್ಲದಿದ್ದರೆ ಅಂತಹವರಿಗೆ ಬೇರೆ ಕಾಲೇಜುಗಳಲ್ಲಿ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಹೇಳಿದೆ. ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿದವರು http://dec.karnataka.gov.in ವೆಬ್‌ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.