ರುಚಿ ರುಚಿಯಾದ ಮೋತಿಚೂರ್ ಲಡ್ಡು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಹೇಳಿಕೊಡುತ್ತೇವೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
ಮೋತಿಚೂರ್ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು:
1 ಕಪ್ ಕಡಲೆಬೇಳೆ
2 ಕಪ್ ಎಣ್ಣೆ
1 ಕಪ್ ಸಕ್ಕರೆ
ಚಿಟಿಕೆ ಫುಡ್ ಕಲರ್
2 ಚಮಚ ಏಲಕ್ಕಿ ಪುಡಿ
4 ಚಮಚ ತುಪ್ಪ
2 ಚಮಚ ದ್ರಾಕ್ಷಿ
2 ಚಮಚ ಸಣ್ಣಗೆ ಹೆಚ್ಚಿದ ಬಾದಾಮಿ
ಮಾಡುವ ವಿಧಾನ :
ಮೊದಲಿಗೆ 1 ಕಪ್ ಕಡಲೆಬೇಳೆಯನ್ನು ತೊಳೆದು ಸುಮಾರು 4 ಗಂಟೆಗಳ ಕಾಲ ನೆನೆಸಿ, ನೀರನ್ನು ಹಾಕದೆಯೇ ಕಡಲೆಬೇಳೆಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಅದಕ್ಕೆ ರುಬ್ಬಿಟ್ಟುಕೊಂಡಿರುವ ಮಿಶ್ರಣವನ್ನು ಸಣ್ಣ್ ಸಣ್ಣ್ ಉಂಡೆಗಳನ್ನಾಗಿ ಮಾಡಿ ಹಸಿ ವಾಸನೆ ಹೋಗುವವರೆಗೆ ಅಂದರೆ ಎರಡು ನಿಮಿಷ ಕರಿಯಿರಿ.
ನಂತರ ಈ ಉಂಡೆಗಳನ್ನು ಮಿಕ್ಸಿ ಜಾರ್ ಗೆ ಹಾಕಿಕೊಂಡು ಪುಡಿ ಪುಡಿಯಾಗಿ ರುಬ್ಬಿ ಎತ್ತಿಟ್ಟುಕೊಳ್ಳಿ.
ಎರಡು ಚಮಚ ತುಪ್ಪಕ್ಕೆ 2 ಚಮಚ ದ್ರಾಕ್ಷಿ, 2 ಚಮಚ ಸಣ್ಣಗೆ ಹೆಚ್ಚಿದ ಬಾದಾಮಿ ಹಾಕಿ ಹುರಿದಿಟ್ಟುಕೊಳ್ಳಿ.
ಬಾಣಲಿಗೆ ಒಂದು ಕಪ್ ಸಕ್ಕರೆ ಹಾಗೂ ಕಾಲು ಕಪ್ ನೀರು ಹಾಕಿ ಸಕ್ಕರೆಯನ್ನು ಕರಗಿಸಿಕೊಂಡು ಅದಕ್ಕೆ ಚಿಟಿಕೆ ಫುಡ್ ಕಲರ್ ಹಾಕಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
ತದನಂತರ ಸಕ್ಕರೆ ಪಾಕಕ್ಕೆ ಈಗಾಗಲೇ ರುಬ್ಬಿ ಪುಡಿ ಮಾಡಿ ಇಟ್ಟುಕೊಂಡಿರುವ ಕಡಲೆಬೇಳೆಯನ್ನು ಹಾಗೂ ಹುರಿದಿಟ್ಟು ಕೊಂಡಿರುವ ದ್ರಾಕ್ಷಿ, ಬಾದಾಮಿಯನ್ನು ಸೇರಿಸಿ 10 ನಿಮಿಷ ಬಿಟ್ಟು ತುಪ್ಪವನ್ನು ಕೈಗೆ ಸವರಿಕೊಂಡು ಉಂಡೆಗಳನ್ನಾಗಿ ಮಾಡಿದರೆ ಮೋತಿಚೂರ್ ಲಡ್ಡು ತಯಾರಾಗುತ್ತದೆ.