ಉಡುಪಿ: ಕರ್ನಾಟಕದಲ್ಲಿಯೂ ಕೂಡ ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ವ್ಯಾಪಕವಾಗಿ ಚಾಚುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಗಳಲ್ಲಿ 767 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 83,786ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.
ಜಿಲ್ಲೆಯಲ್ಲಿ ಪತ್ತೆಯಾಗಿರುವ 700ಕ್ಕೂ ಅಧಿಕ ಪ್ರಕರಣಗಳ ಪೈಕಿ ಉಡುಪಿ ತಾಲೂಕಿನಲ್ಲಿ 451 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕುಂದಾಪುರದ 210 ಮಂದಿಗೆ ಕೊರೊನಾ ಪಾಸಿಟಿವ್ ಬಂದರೆ, ಕಾರ್ಕಳದಲ್ಲಿ 104 ಮಂದಿಗೆ ಪಾಸಿಟಿವ್ ಇರುವ ಕುರಿತು ವರದಿಯಾಗಿದೆ. ಇನ್ನು, ಜಿಲ್ಲೆಯಲ್ಲಿ ಸೋಂಕಿನಿಂದಾಗಿ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದ್ದು, ಕಳೆದ 24ಗಂಟೆಗಳಲ್ಲಿ 439 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೆಲ್ತ್ ಬುಲೆಟಿನ್ನಲ್ಲಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಸದ್ಯ ಜಿಲ್ಲೆಯಲ್ಲಿ 5,092 ಸಕ್ರಿಯ ಪ್ರಕರಣಗಳು ಇವೆ ಎನ್ನಲಾಗಿದೆ.