ಉಡುಪಿ: ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆ ಏರಿಕೆ ಹಾಗೂ ಜಿ.ಎಸ್.ಟಿ ಏರಿಕೆಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿದೆ. ಹಾಗಾಗಿ ಸಿಮೆಂಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ.28ರಿಂದ 12ಕ್ಕೆ ಇಳಿಕೆ ಮಾಡಬೇಕು ಎಂದು ಕ್ರೆಡೈ ಅಧ್ಯಕ್ಷ ಡಾ.ಜೆರ್ರಿ ವಿನ್ಸೆಂಟ್ ಡಯಾಸ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2020ರಿಂದ ಕಚ್ಚಾ ವಸ್ತುಗಳ ಬೆಲೆ ಸ್ಥಿರವಾಗಿ ಹೆಚ್ಚುತ್ತಿದ್ದು, ಕಾರ್ಮಿಕರ ಕೊರತೆ ಕೂಡ ಹೆಚ್ಚಾಗಿದೆ. ಹಾಗಾಗಿ ಒಪ್ಪಂದದ ಮೊತ್ತದ ಮೇಲೆ ಸರ್ಕಾರ ವಿಧಿಸುವ ಸ್ಟ್ಯಾಂಪ್ ಡ್ಯೂಟಿ ಅನ್ನು ಶೇ.3ಕ್ಕೆ ಇಳಿಸುವಂತೆ ಆಗ್ರಹಿಸಿದರು.
ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆ ಏರಿಕೆ ಹಾಗೂ ಜಿ.ಎಸ್.ಟಿ ಏರಿಕೆಯಿಂದಾಗಿ ಅನೇಕ ಕಟ್ಟಡ ಕಾಮಗಾರಿ ಯೋಜನೆಗಳನ್ನು ವಿಳಂಬವಾಗುತ್ತಿದೆ. ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆಯಲ್ಲಿಯೂ ಸಮಸ್ಯೆಯಾಗುತ್ತಿದೆ. ನೋಂದಣಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.