ಉಡುಪಿ: ಪ್ರವಾಸೋದ್ಯಮಕ್ಕೆ ಹೆಸರಾದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ತೀರದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು ಮಲ್ಪೆ ಬೀಚ್ ನಲ್ಲಿ ಹೊಸದಾದ ತೇಲುವ ಸೇತುವೆ ಶುಕ್ರವಾರ ಲೋಕಾರ್ಪಣೆಗೊಂಡಿದೆ.
ಈ ತೇಲುವ ಸೇತುವೆಯು ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು, ಗಟ್ಟಿ ಗುಂಡಿಗೆ ಇರುವ ಯಾರು ಬೇಕಾದರೂ ಆನಂದಿಸಬಹುದು. ಈ ಸೇತುವೆಯ ಮೇಲೆ ನಡೆದು ಹೋಗಬಹುದು. ಇದರಡಿಯಲ್ಲಿ ಬರುವ ಅಲೆಗಳು ಸಣ್ಣದಿರಲಿ, ದೊಡ್ಡದಿರಲಿ, ಈ ಸೇತುವೆಯನ್ನು ಮೇಲಕ್ಕೆತ್ತಿ ಕೆಳಗಿಳಿಸುತ್ತದೆ. ಅಲೆಯ ರಬಸಕ್ಕೆ ಅಲೆಯಂತಯೇ ಮೇಲೇರಿ ಅದೇ ರಭಸದಲ್ಲಿ ಕೆಳಗಿಳಿದು ಬರುವ ಅನುಭವ ವರ್ಣಸಲಸಾಧ್ಯ. ಪ್ರವಾಸಿಗರಿಗೆ ಅತ್ಯಂತ ನವನವೀನ ಅನುಭವ ನೀಡುವ ಹಿನ್ನೆಲೆ ಇದನ್ನು ನಿರ್ಮಿಸಲಾಗಿದೆ.
ಸೇತುವೆಯು ೧೦೦ ಮೀಟರ್ ಉದ್ದವನ್ನು ಮತ್ತು ೩.೫ ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ. ಸೇತುವೆಯ ಎರಡು ಇಕ್ಕೆಲಗಳಲ್ಲಿ ರೇಲಿಂಗ್ ಸಿಸ್ಟಮ್ ಅಳವಡಿಸಿದ್ದು ಸುಮಾರು ೮೦ ಲಕ್ಷ ರೂ ವೆಚ್ಚದಲ್ಲಿ ಬೀಚ್ ನಿರ್ವಹಣಾ ತಂಡದ ಸುದೇಶ್ ಶೆಟ್ಟಿ ನೇತೃತ್ವದಲ್ಲಿ ನಿರ್ಮಿಸಲಾಗಿದೆ.
ಇದರಲ್ಲಿ ೧೦ ಮಂದಿ ಲೈಫ್ ಗಾರ್ಡ್, ೩೦ ಲೈಫ್ ಬಾಯ್ಸ್ ಹೊಂದಿದ್ದು, ಪ್ರವಾಸಿಗರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿಕೊಂಡು ಸೇತುವೆಯ ಮೇಲೆ ನಡೆಯಬಹುದು. ಇದನ್ನು ಹೈ ಡೆನ್ಸಿಟಿ ಪಾಲಿಎತಿಲೀನ್ ಬ್ಲಾಕ್‌ಗಳಿಂದ ಮಾಡಲ್ಪಟ್ಟಿದೆ. ಅಲೆಯ ಏರಿಳಿತದಿಂದ ಭಯಬೀತರಾದವರು ರೈಲಿಂಗುಗಳ ಆಸರೆ ಪಡೆಯಬಹುದು. ಕೇರಳದ ಬೇಪೂರ್ ಬೀಚ್ ಹೊರತುಪಡಿಸಿದರೆ ಇಂತಹ ಸೌಲಭ್ಯ ಹೊಂದುವ ಕರ್ನಾಟಕದ ಮೊದಲ ಬೀಚ್ ಮಲ್ಪೆಯಾಗಿದೆ ಎಂದು ಬೀಚ್ ನಿರ್ವಹಣಾ ತಂಡದ ಸುದೇಶ್ ಶೆಟ್ಟಿ ಹೇಳಿದ್ದಾರೆ.