ಮಂಗಳೂರು: ನಗರದ ನಂದಿಗುಡ್ಡೆಯ ಫ್ಲ್ಯಾಟ್ ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳ ಸಾಗಣಿಕೆ, ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ತಿಂಗಳ ಹಿಂದೆ ದಾಳಿ ನಡೆದಿದ್ದು ತನಿಖೆ ಮುಂದುವರೆದಿದೆ. ಈ ಸಂಬಂಧ ಮತ್ತೋರ್ವ ಆರೋಪಿಯನ್ನು ಮಂಗಳವಾರ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಉಳ್ಳಾಲ ನಿವಾಸಿ ಅಬ್ದುಲ್ ರಾಝಿಕ್ ಉಳ್ಳಾಲ (44) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರು ಸೇರಿದಂತೆ ಒಟ್ಟು 16 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ವಯೋವೃದ್ಧರ ಸಹಿತ ನಾಲ್ವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿಯಿದ್ದು, ಕೆಲವರು ವಿದೇಶದಲ್ಲಿ ನೆಲೆಸಿರುವುದಾಗಿ ತಿಳಿದುಬಂದಿದೆ.
ಸಿಸಿಬಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪ್ರಮುಖ ನಾಲ್ವರು ಆರೋಪಿಗಳು ಮೊದಲಿಗೆ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಪ್ರಕರಣದ ಸಂತ್ರಸ್ತೆಯರಾದ ಇಬ್ಬರು ಅಪ್ರಾಪ್ತ ಬಾಲಕಿಯರು ನೀಡಿದ ದೂರಿನ ಪ್ರಕಾರ ಒಟ್ಟು ಹತ್ತು ಪ್ರಕರಣಗಳನ್ನು ದಾಖಲಾಗಿದೆ.