ನವದೆಹಲಿ: ಪತಿ ಪತ್ನಿ ಇಬ್ಬರೂ ಒಪ್ಪಿದ್ದರೆ ವಿವಾಹ ವಿಚ್ಛೇದನಕ್ಕೆ ಆರು ತಿಂಗಳು ಕಾಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಸೋಮವಾರ (ಮೇ 1) ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಪರಸ್ಪರ ಸಮ್ಮತಿಯಿದ್ದರೆ ದಂಪತಿಯು ಇನ್ನು ಮುಂದೆ ಆರು ತಿಂಗಳ ಕಾಲ ಕಾಯದೇ ವಿಚ್ಛೇದನ ಪಡೆಯಬಹುದಾಗಿದೆ ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್ ಎಸ್.ಕೆ.ಕೌಲ್ ಅವರನ್ನೊಳಗೊಂಡ ಪೀಠ ಹೇಳಿದೆ.ವಿಚ್ಛೇದನ ಕುರಿತು ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ 2022ರ ಸೆಪ್ಟೆಂಬರ್ 29ರಂದು ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು.