ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಿರಂತರವಾಗಿ ಸಾಗುತ್ತಿದೆ. 2024ರ ಜನವರಿಯಲ್ಲಿ ಉತ್ತಾರಾಯಣ ಆರಂಭದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಕರ್ನಾಟಕದಿಂದ ರವಾನಿಸಿದ ಶಿಲೆಗಳಿಂದ ಅಡಿಪಾಯ ರಚನೆಯಾಗುತ್ತಿದೆ. ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಗಳಾದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಅವರು ಮಂಗಳೂರಿನ ಉರ್ವಾ ಲೋಕಾಯುಕ್ತ ಕಚೇರಿ ಬಳಿ ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಗಮದ ನೂತನ ಪ್ರಧಾನ ಕಚೇರಿ ‘ಮತ್ಸ್ಯ ಸಂಪದ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂ.1ಕ್ಕೆ ಗರ್ಭಗುಡಿಯ ಶಿಲಾನ್ಯಾಸ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ. ಅದಕ್ಕೆ ಬೇಕಾದ ಪೂರ್ವಭಾವಿ ಕಾರ್ಯಗಳೆಲ್ಲ ನಿಗದಿತ ಕಾಲದಲ್ಲಿಯೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀಗಳು, ಶಿವಲಿಂಗ ಪತ್ತೆಯಾಗಿರುವ ವಿಚಾರ ಸಂತಸ ತಂದಿದೆ. ಇಲ್ಲಿಯವರೆಗೆ ಇದ್ದ ನಂಬಿಕೆ, ಪುರಾಣದಲ್ಲಿ ಇದ್ದ ಮಾಹಿತಿ ಸತ್ಯವಾಗಿದೆ. ಇದಷ್ಟೇ ಅಲ್ಲದೆ, ಇಂತಹ ಎಲ್ಲಿಯೇ ಇದ್ದರೂ ಬೆಳಕಿಗೆ ಬರಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ. ನ್ಯಾಯಾಲಯದ ಮೂಲಕ ವಿಚಾರಣೆ ನಡೆಯುತ್ತಿರುವ ಈ ವಿಚಾರದಲ್ಲಿ ಯಾರೂ ಸಂಘರ್ಷಕ್ಕಿಳಿಯಬಾರದು ಎಂದರು.