ಮಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ವಿರುದ್ಧ ಮಂಗಳೂರು ಮುಸ್ಲಿಮ್ಸ್ ಫೇಸ್ ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗಿತ್ತು, ಈ ಕುರಿತು ಫೇಸ್‌ಬುಕ್ ಪೇಜ್ ವಿರುದ್ಧ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಂಗಳೂರು ಮುಸ್ಲಿಮ್ಸ್ ಫೇಸ್‌ಬುಕ್ ಪೇಜ್‌ನಲ್ಲಿ ಕಾನೂನು ಬಾಹಿರ ಬರವಣಿಗೆ ಮಾಡಿರುವುದರಿಂದ ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಯಾವುದೇ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಆಕ್ಷೇಪಾರ್ಹವೆಂದು ಪ್ರಕರಣ ದಾಖಲಾದ ಮೇಲೆ ಆ ಪೋಸ್ಟ್‌ಅನ್ನು ಶೇರ್, ಕಮೆಂಟ್, ಲೈಕ್ ಮಾಡುವವರು ಸಮಾನ ಅಪರಾಧಿಗಳಾಗುತ್ತಾರೆ. ಹೀಗೆ ಕಾನೂನನ್ನು ನಿರ್ಲಕ್ಷಿಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಗಳೂರು ಮುಸ್ಲಿಮ್ಸ್ ಫೇಸ್‌ಬುಕ್ ಪೇಜ್ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಮುಸ್ಲಿಮ್ಸ್ ಪೇಜ್‌ಅನ್ನು ಟ್ಯಾಗ್ ಮಾಡಿ ಶೇರ್ ಮಾಡುತ್ತಿದ್ದ ಮಹಮ್ಮದ್ ಶಫೀಕ್ ಮೇಲೂ ಪ್ರಕರಣ ದಾಖಲಿಸಿದ್ದೇವೆ. ಐ.ಪಿ.ಸಿ 153(A), 505(b), 505(c), 507, IT Act 66(c), 66(d) ಅಡಿ ಪ್ರಕರಣ ದಾಖಲಾಗಿದೆ. ಮಂಗಳೂರು ಮುಸ್ಲಿಮ್ಸ್ ಫೇಸ್‌ಬುಕ್ ಪೇಜ್ ಕುರಿತು ತನಿಖೆ ಆರಂಭಿಸಿದ್ದು, 100ಕ್ಕೂ ಅಧಿಕ ಸಂಘಟನೆಗಳು, 1064 ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದೆ. ಎರಡು ತಿಂಗಳಿನಿಂದ ಕೆಲ ಸಾಮಾಜಿಕ ಜಾಲತಾಣಗಳ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಗಮನವಿರಿಸಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದರು.