ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಶಿಕ್ಷಕಸ್ನೇಹಿ, ಜನಸ್ನೇಹಿ, ಹಾಗೂ ವಿದ್ಯಾರ್ಥಿಸ್ನೇಹಿಯಾಗಿಸುವ ಸಲುವಾಗಿ ಶಿಕ್ಷಣ ಇಲಾಖೆಯು ಸಾಮಾಜಿಕ ತಾಣಗಳನ್ನು ತೆರೆಯಲು ತಯಾರಿ ನಡೆಸಿದೆ. ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಕೂ, ಟೆಲಿಗ್ರಾಮ್ ಗಳಲ್ಲಿ ಖಾತೆಗಳನ್ನು ತೆರೆಯಲಾಗುತ್ತಿದೆ.
ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳಿಗೆ ಹಾಗೂ ಎರಡುವರೆ ಲಕ್ಷ ಶಿಕ್ಷಕರಿಗೆ ಸಹಾಯವಾಗುವ ಉದ್ದೇಶದಿಂದ ಈ ತಾಣಗಳನ್ನು ತೆರೆಯಲಾಗುತ್ತಿದೆ. ಈ ತಾಣಗಳಲ್ಲಿ ಶಾಲೆ ಆರಂಭ, ಖಾಸಗಿ ಶಾಲೆಗಳಿಗೆ ಅನುಮತಿ, ಶುಲ್ಕ ನಿಗದಿ, ತರಗತಿಗಳ ಆರಂಭ, ಶಿಕ್ಷಕರ ಸಮಸ್ಯೆಗಳು ಹಾಗೂ ವರ್ಗಾವಣೆ, ಪರೀಕ್ಷಾ ವೇಳಾಪಟ್ಟಿ ಪ್ರಕಟಣೆ, ಫಲಿತಾಂಶ ಪ್ರಕಟಣೆಯಂತಹ ಮಾಹಿತಿ, ಶಿಕ್ಷಣ ಇಲಾಖೆಯ ಆದೇಶಗಳು, ಕಾರ್ಯವೈಖರಿ, ಸೌಲಭ್ಯಗಳು ಹೀಗೆ ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.