ಪಾಕ್ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ ಮೈದಾನದಲ್ಲಿ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದ ಘಟನೆ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್) 2022ರ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವೆ ಸೋಮವಾರ ನಡೆದ ಪಂದ್ಯದಲ್ಲಿ ನಡೆದಿದೆ.
ಪೇಶಾವರ್ ಝಲ್ಮಿ ಬ್ಯಾಟಿಂಗ್ ಹಾಗೂ ಲಾಹೋರ್ ಖಲಂದರ್ಸ್ ತಂಡ ಬೌಲಿಂಗ್ ಮಾಡುತ್ತಿತ್ತು. ಈ ವೇಳೆ ಲಾಹೋರ್ ಖಲಂದರ್ಸ್ ತಂಡದ ಕಮ್ರಾನ್ ಗುಲಾಮ್ ಅವರು ಪೇಶಾವರ್ ತಂಡದ ಬ್ಯಾಟರ್ ಹರ್ಜತುಲ್ಲಾ ಝಝಾಯ್ ಅವರ ಕ್ಯಾಚ್ ಅನ್ನು ಕೈಬಿಟ್ಟಿದ್ದರು. ಇದರಿಂದ ಬೌಲರ್ ರೌಫ್ ಅವರು ಕೋಪಗೊಂಡಿದ್ದರು. ನಂತರ ಇದೇ ಓವರ್ ನಲ್ಲಿ ಮತ್ತೊಬ್ಬ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರ ಕ್ಯಾಚ್ ಅನ್ನು ಫಾಹಾದ್ ಅಹ್ಮದ್ ಹಿಡಿಯುವ ಮೂಲಕ ರೌಫ್ ಮೊದಲ ವಿಕೆಟ್ ಪಡೆದುಕೊಂಡರು.
ರೌಫ್ ಅವರು ವಿಕೆಟ್ ಪಡೆದ ಖುಷಿಯಲ್ಲಿ ಸಂಗಡಿಗರೊಂದಿಗೆ ಸಂಭ್ರಮಿಸುತ್ತಿರುವಾಗ ಕಮ್ರಾನ್ ಗುಲಾಮ್ ಅವರು ಶುಭಕೋರಲು ಬಂದಿದ್ದು, ಈ ವೇಳೆ ರೌಫ್ ಅವರು ಕಮ್ರಾನ್ ಗುಲಾಮ್ ಅವರ ಕೆನ್ನೆಗೆ ಹೊಡೆದಿದ್ದಾರೆ. ಆದರೂ ಕಮ್ರಾನ್ ನಗುತ್ತಾ ಹೊಡೆದಿರುವುದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಕ್ರಿಕೆಟ್ ಜಗತ್ತು ತಲೆ ತಗ್ಗಿಸುವ ಮತ್ತೊಂದು ಘಟನೆಗೆ ಪಿಎಸ್ಎಲ್ ಸಾಕ್ಷಿಯಾಗಿದೆ.