ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಮೂರು ತಿಂಗಳು ಕಳೆದಿವೆ. ದೈಹಿಕವಾಗಿ ನಮ್ಮನ್ನಗಲಿದ್ದರೂ ಪುನೀತ್ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಚಿರಾಯು. ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಸಿನಿಮಾದ ಪೋಸ್ಟರ್ ಅನ್ನು ಜನವರಿ 26 ಬುಧವಾರದಂದು ರಿಲೀಸ್ ಮಾಡಲಾಗಿದ್ದು, ಇದರಲ್ಲಿ ಅಪ್ಪು ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಚೇತನ್ ನಿರ್ದೇಶನದ ಜೇಮ್ಸ್ ಸಿನಿಮಾದ ಪೋಸ್ಟರ್ಗಳನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯವನ್ನು ಕೋರಿದ್ದು, ಈ ಪೋಸ್ಟರ್ನಲ್ಲಿ “ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್” ಎಂಬ ಸ್ಲೋಗನ್ ಎಲ್ಲರ ಗಮನ ಸೆಳೆಯುತ್ತಿದೆ.
ಅಪ್ಪು ನಿಧನದ ಬಳಿಕ ಜೇಮ್ಸ್ ಸಿನಿಮಾದ ಶೂಟಿಂಗ್ನ್ನು ಪೂರ್ಣಗೊಳಿಸಲಾಗಿದ್ದು, ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ. ಪುನೀತ್ ರಾಜ್ಕುಮಾರ್ ಹುಟ್ಟಿದ ದಿನವಾದ ಮಾರ್ಚ್ 17ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತದೆ. ಮಾರ್ಚ್ 17ರಿಂದ 23ರವರಗೆ ಬೇರೆ ಯಾವುದೇ ಸಿನಿಮಾವನ್ನು ರಿಲೀಸ್ ಮಾಡದಂತೆ ಕರ್ನಾಟಕ ಚಲನ ಚಿತ್ರ ವಿತರಕರು ಚಿಂತನೆ ನಡೆಸುತ್ತಿದ್ದಾರೆ.