ಬೆಂಗಳೂರು: ಹಿಜಾಬ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚಿಸಿದ್ದಾರೆ.
ಏ.22 ರಿಂದ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ ಆರಂಭವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಶಿಕ್ಷಣ ಇಲಾಖೆ ಇಂದ ಆದೇಶ ಹೋರಡಿಸಲಾಗುತ್ತದೆ. ಈ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಪಾಲನೆ ಮಾಡುತ್ತಿದ್ದು, ಕಾಲೇಜಿಗೆ ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರಬಾರದು. ಆಯಾ ಕಾಲೇಜುಗಳ ಎಸ್ಡಿಎಮ್ಸಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.
ರಾಜ್ಯದ ಜಿಲ್ಲಾ ಕಾಲೇಜುಗಳಲ್ಲಿ ಶೇ.90ರಷ್ಟು ಸಮವಸ್ತ್ರವಿದ್ದು, ಉಳಿದ ಶೇ.10ರಷ್ಟು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರವಿಲ್ಲ. ಮುಖ್ಯ ಪರೀಕ್ಷೆಗೆ ಗೈರಾದವರಿಗೆ ಮರುಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬೆನ್ನಲ್ಲೇ ಪಿಯುಸಿ ಪರೀಕ್ಷೆಗೂ ಹಿಜಾಬ್ ಬ್ಯಾನ್ ಮಾಡಲಾಗುವುದು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.