ಕೊರೊನಾ ಸೋಂಕು ಪ್ರಪಂಚಕ್ಕೆ ಕಾಲಿಟ್ಟಾಗಿನಿಂದಲೂ ಜನರಲ್ಲಿ ಒಂದು ಆತಂಕವನ್ನು ಸೃಷ್ಟಿ ಮಾಡಿದೆ. ಮೊದಲ ಅಲೆಯಲ್ಲಿ ಜನರು ಒಬ್ಬರಿಗೊಬ್ಬರು ಸ್ಪರ್ಷಿಸಲೂ ಕೂಡ ಹೆದರುವ ವಾತಾವರಣ ಸೃಷ್ಟಿಯಾಗಿತ್ತು. ಕೊರೊನಾ ಮೂರನೇ ಅಲೆ ಸೃಷ್ಟಿಯಾಗಿರುವ ಈ ಸಂದರ್ಭ ಜನರು ಕೊರೊನಾ ಜೊತೆಗೆ ಜೀವನ ನಡೆಸುವುದನ್ನು ಕಲಿಯುತ್ತಿದ್ದಾರೆ. ಇದರೊಂದಿಗೆ ಕೊರೊನಾ ವೈರಸ್ ಹರಡುವ ಕುರಿತು ಅಲ್ಲಲ್ಲಿ ಅನೇಕ ಸಂಶೋಧನೆಗಳೂ ಕೂಡ ನಡೆಯುತ್ತಿದೆ. ಇದೀಗ ಕೊರೊನಾ ಸೋಂಕು ತಗುಲಿರುವ ತಾಯಿ ತನ್ನ ಮಗುವಿಗೆ ಎದೆಹಾಲವನ್ನು ಉಣಿಸಬಹುದೋ? ಅಥವಾ ಬೇಡವೋ? ಎನ್ನುವ ಹಲವು ಸಾಮಾನ್ಯ ಜನರ ಪ್ರಶ್ನೆಗೆ ಕ್ಯಾಲಿಫೋರ್ನಿಯಾ ವಿದ್ಯಾಸಂಸ್ಥೆಯೊಂದು ತನ್ನ ಅಧ್ಯಯನದ ಮೂಲಕ ಸ್ತನ್ಯಪಾನದಿಂದ ಕೋವಿಡ್ ಹರಡುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ.
ಈ ಕುರಿತು ಪೀಡಿಯಾರ್ಟಿಕ್ ರಿಸರ್ಚ್ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟ ಮಾಡಲಾಗಿದ್ದು, ಇದರಲ್ಲಿ ತಿಳಿಸಿರುವ ಪ್ರಕಾರ ಕೊರೊನಾ ಸೋಂಕಿಗೆ ತುತ್ತಾಗಿರುವ ತಾಯಿ ತನ್ನ ಮಗುವಿಗೆ ಎದೆ ಹಾಲನ್ನು ಕುಡಿಸುವುದರಿಂದ ಮಗುವಿಗೆ ಸೋಂಕು ತಗುಲುವುದಿಲ್ಲ ಎಂದು ಹೇಳಲಾಗಿದೆ. ಪೌಲ್ ಕ್ರೋಗ್‌ಸ್ಟಾಡ್ ಎಂಬ ಸಂಪಾದಕರು ತಮ್ಮ ಜರ್ನಲ್‌ನಲ್ಲಿ ಉಲ್ಲೇಖಿಸಿರುವಂತೆ ತಾಯಿ ಹಾಲು ಶಿಶುಗಳಿಗೆ ಪೌಷ್ಟಿಕಾಂಶದ ಅತ್ಯಮೂಲ್ಯ ಮೂಲವಾಗಿದೆ. ಅವರ ಅಧ್ಯಯನದಲ್ಲಿ ಕೊರೊನಾ ಸೋಂಕಿತ ತಾಯಂದಿರ ಎದೆಹಾಲು ಸಾಂಕ್ರಮಿಕ ಅನುವಂಶಿಕ ವಸ್ತುಗಳನ್ನು ಹೊಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಅಲ್ಲದೇ ಅಂತಹ ಶಿಶುಗಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಸೂಚಿಸುವ ಯಾವುದೇ ವೈದ್ಯಕೀಯ ಪುರಾವೆಗಳು ಕೂಡ ಕಂಡುಬಂದಿಲ್ಲ. ಇದರಿಂದ ಕೊರೊನಾ ಸೋಂಕಿತ ತಾಯಿ ತನ್ನ ಮಗುವಿಗೆ ಹಾಲುಣಿಸುವುದು ಅಪಾಯ ಅಲ್ಲ ಎನ್ನುವುದನ್ನು ನಾವು ಮನಗಾಣಬಹುದಾಗಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ(California, USA) ಲೇಖಕರು ಮಾರ್ಚ್ ಮತ್ತು ಸೆಪ್ಟೆಂಬರ್ 2020ರಲ್ಲಿ ಮಮ್ಮೀಸ್ ಮಿಲ್ಕ್ ಹ್ಯೂಮನ್ ಮಿಲ್ಕ್ ಬಯೋರೆಪೊಸಿಟರವರು ನೀಡಿರುವ 110ಮಹಿಳೆಯರ ಎದೆಹಾಲಿನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಆ ಮಹಿಳೆಯರಲ್ಲಿ 65ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. 9 ಮಹಿಳೆಯರಿಗೆ ಕೊರೊನಾ ರೋಗಲಕ್ಷಣಗಳಿದ್ದರೂ ಕೂಡ ಅವರಿಗೆ ಕೊರೊನಾ ನೆಗೆಟಿವ್ ಇರುವ ಕುರಿತು ವರದಿಯಾಗಿತ್ತು. ಇನ್ನುಳಿದ 36ಮಂದಿ ಮಹಿಳೆಯರು ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದರೂ ಕೂಡ ಪರೀಕ್ಷೆಯನ್ನು ಮಾಡಿಸಿರಲಿಲ್ಲ ಎಂದು ಹೇಳಿದ್ದಾರೆ.
ಪೌಲ್ ಕ್ರೋಗ್‌ಸ್ಟಾಡ್ ಮತ್ತು ಅವರ ಸಹೋದ್ಯೋಗಿಗಳು ಕೊರೊನಾ ಪಾಸಿಟಿವ್ ಇರುವ ಹಾಗೂ ಇದರ ರೋಗಲಕ್ಷಣಗಳಿರುವ ಏಳು ಮಹಿಳೆಯರ ಅಂದರೆ ಶೇ.6ರಷ್ಟು ಮಹಿಳೆಯರ ಎದೆಹಾಲಿನ ಮೊದಲ ಮಾದರಿಯಲ್ಲಿ ಸಾರ್ಸ್-ಕೋವಿಡ್-2 ಜೆನೆಟಿಕ್ ಅಂಶ ಇರುವುದನ್ನು ಕಂಡುಕೊಂಡರು. ನಂತರ ಒಂದರಿಂದ ತೊಂಬತ್ತೇಳು ದಿನಗಳ ಬಳೀಕ ಇದೇ ಏಳು ಮಹಿಳೆಯರಿಂದ ಎರಡನೇ ಬಾರಿಗೆ ಎದೆಹಾಲನ್ನು ಪಡೆದು ಶೇಖರಿಸಿ ಪರೀಕ್ಷಿಸಿದಾಗ, ಸಾಂಕ್ರಮಿಕತೆ ಹೊಂದಿರುವ ಎಸ್.ಜಿ.ಆರ್.ಎನ್.ಎ ಎಂದು ಕರೆಯಲ್ಪಡುವ ಸಾರ್ಸ್-ಕೋವಿಡ್-2 ಜೆನೆಟಿಕ್‌ನ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂಬ ಸ್ಪಷ್ಟತೆಯನ್ನು ಸಂಪಾದಕರು ನೀಡಿದ್ದಾರೆ.
ಆದರೆ ನಾವು ಪ್ರಮುಖವಾಗಿ ಗಮನಿಸಬೇಕಾಗಿರುವುದು ತಾಯಿಯ ಎದೆಹಾಲನ್ನು ಕುಡಿದ ಮಗುವಿಗೆ ಕೊರೊನಾ ಸೋಂಕು ತಗುಲುವುದಿಲ್ಲ ಎನ್ನುವುದನ್ನು ನಾವು ಅಧ್ಯಯನದಿಂದ ಕಂಡುಕೊಂಡಿದ್ದೇವೆ. ಆದರೆ ಕೆಲವೊಂದು ವೈದ್ಯಕೀಯ ಅಂಶಗಳನ್ನು ಕೂಡ ನಾವು ಬಿಟ್ಟಿರಬಹುದು, ಹಾಗೆಯೇ ಕಡಿಮೆ ಪ್ರಮಾಣದ ಮಾದರಿಗಳನ್ನು ತೆಗೆದುಕೊಂಡು ಈ ಸಂಶೋಧನೆಯನ್ನು ಮಾಡಿರುವುದರಿಂದ ಎದೆಹಾಲಿನಲ್ಲಿ ಸಾರ್ಸ್-ಕೋವಿಡ್-2-ಆರ್.ಎನ್.ಎ ಇರುವಿಕೆಯನ್ನು ಕಲ್ಪಿಸುವ ಎಲ್ಲಾ ಸಂಭಾವ್ಯ ಅಂಶಗಳನ್ನು ಸೆರೆಹಿಡಿಯದಿರಬಹುದೆಂದು ಲೇಖಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಕೊರೊನಾ ಸೋಂಕಿನ ಕುರಿತು ಹಲವರು ಹಲವು ರೀತಿಯ ಸಂಶೋಧನೆಗಳನ್ನು ಮಾಡುತ್ತಿರುತ್ತಾರೆ. ಅಂತೆಯೇ ಒಬ್ಬೊಬ್ಬರ ರೀಸರ್ಚ್ ಒಂದೊಂದು ರೀತಿಯಾಗಿ ಸಾರಾಂಶವನ್ನು ನೀಡುತ್ತದೆ. ಹಾಗೆಯೇ ಇಲ್ಲಿಯೂ ಕೂಡ ಕೊರೊನಾ ಸೋಂಕಿತ ತಾಯಿಯ ಎದೆ ಹಾಲನ್ನು ಕುಡಿದ ಮಗುವಿಗೆ ಸೋಂಕು ತಗುಲುವುದಿಲ್ಲ ಎನ್ನುವುದು ಈ ಸಂಶೋದನೆಯಲ್ಲಿ ಸಾಬೀತಾದರೆ, ಇನ್ನೊಬ್ಬರು ಬೇರೆಯದೇ ಆದ ಅಂಶಗಳನ್ನು ಮಾದರಿಯಾಗಿಟ್ಟುಕೊಂಡು ರೀಸರ್ಚ್ ಮಾಡಿದಾಗ ಬೇರೆಯೆ ವಿಚಾರಗಳು ಪತ್ತೆಯಾಗಬಹುದು. ಒಟ್ಟಾರೆಯಾಗಿ ಪ್ರಪಂಚವನ್ನೇ ಕಾಡುತ್ತಿರುವ ಈ ಕೊರೊನಾ ವೈರಸ್‌ನ ಹರಡುವಿಕೆಯ ಕುರಿತು ಇಂದಿಗೂ ಕೂಡ ಒಂದು ಸ್ಪಷ್ಟತೆ ಸಿಗದಿರುವುದು ವಿಷಾದನೀಯವಾಗಿದೆ.